ADVERTISEMENT

ಸ್ಪೆಕ್ಟ್ರಂ: ಸಚಿವರ ಜತೆ ಪ್ರಧಾನಿ ಸಭೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 19:30 IST
Last Updated 11 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಸುಪ್ರೀಂಕೋರ್ಟ್ 2ಜಿ ಸ್ಪೆಕ್ಟ್ರಂ ಹಂಚಿಕೆಯ 122 ಪರವಾನಗಿಗಳನ್ನು ರದ್ದುಪಡಿಸಿ ರುವುರಿಂದ ಒಟ್ಟಾರೆ ದೂರಸಂಪರ್ಕ ವಲಯದ ಮೇಲಾಗುವ ಪರಿಣಾಮ ಮತ್ತು ಮುಂದಿನ ಮಾರ್ಗೋಪಾಯಗಳ ಕುರಿತು ಪ್ರಧಾನಿ ಮನಮೋಹನ್ ಸಿಂಗ್ ಅವರು ಶನಿವಾರ ಇಲ್ಲಿ ಹಿರಿಯ ಸಚಿವರೊಂದಿಗೆ ಸಮಾಲೋಚಿಸಿದರು.

ಸಭೆಯಲ್ಲಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಗೃಹ ಸಚಿವ ಪಿ. ಚಿದಂಬರಂ, ದೂರಸಂಪರ್ಕ ಸಚಿವ ಕಪಿಲ್ ಸಿಬಲ್, ಕಾನೂನು ಸಚಿವ ಸಲ್ಮಾನ್ ಖುರ್ಷೀದ್, ಅಟಾರ್ನಿ ಜನರಲ್ ಜಿ.ಇ. ವಹನ್ವತಿ, ದೂರಸಂಪರ್ಕ ಕಾರ್ಯದರ್ಶಿ ಆರ್.    ಚಂದ್ರಶೇಖರ್ ಮತ್ತಿತರರು ಭಾಗವಹಿಸಿದ್ದರು.

ದೇಶದಾದ್ಯಂತ ಒಂಬತ್ತು ದೂರಸಂಪರ್ಕ ಕಂಪೆನಿಗಳ 122 ಲೈಸೆನ್ಸ್‌ಗಳು ರದ್ದಾಗಿರುವುದರಿಂದ ಖಾಲಿಯಾಗಿರುವ ಸುಮಾರು 546 ಮೆಗಾಹಟ್ಜ್ 2ಜಿ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆಯನ್ನು ಆರಂಭಿಸುವ ಬಗ್ಗೆಯೂ ಸಭೆ ಚರ್ಚಿಸಿತು.


ಈ ನಿಟ್ಟಿನಲ್ಲಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ವು ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಸ್ಪೆಕ್ಟ್ರಂ ಹರಾಜಿನ ಮಾರ್ಗದರ್ಶಿಗಳ ಮೇಲೆ ಸಂಬಂಧಪಟ್ಟವರಿಂದ ಸಮಾಲೋಚನಾ ಪೂರ್ವ ಕಾಗದಪತ್ರಗಳ ಪ್ರತಿಕ್ರಿಯೆ ಕೇಳುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ನಾರ್ವೆಯ ಟೆಲಿನಾರ್, ರಷ್ಯಾದ ಸಿಸ್ಟೆಮಾ ಮತ್ತಿತರ ಕೆಲವು ವಿದೇಶಿ ಟೆಲಿಕಾಂ ನಿರ್ವಾಹಕರು ತಾವು ಹೊಂದಿದ್ದ ಲೈಸೆನ್ಸ್ ರದ್ದಾಗಿರುವುದರಿಂದ ತಮ್ಮ ಬಂಡವಾಳದ ಸುರಕ್ಷತೆಗಾಗಿ ಹೊಸ ಲೈಸೆನ್ಸ್ ಮಂಜೂರು ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದು, ಇದರಿಂದಾಗಿಬಹಳ ಕ್ಲಿಷ್ಟಕರ ಪರಿಸ್ಥಿತಿ ಎದುರಾಗಿದೆ.
 
ಯೂನಿನಾರ್ ಪಾಲುದಾರನಾದ ಟೆಲಿನಾರ್ ರೂ 14 ಸಾವಿರ ಕೋಟಿಗಳನ್ನು ಮತ್ತು ಶ್ಯಾಮ್-ಸಿಸ್ಟೆಮಾದ ಜಂಟಿ ಪಾಲುದಾರನಾದ ಸಿಸ್ಟೆಮಾ ರೂ 12 ಸಾವಿರ ಕೋಟಿಗಳನ್ನು ಸ್ಪೆಕ್ಟ್ರಂನಲ್ಲಿ ಬಂಡವಾಳವಾಗಿ ಹೂಡಿವೆ. ಇವೆರಡೂ ಕಂಪೆನಿಗಳು ತಮ್ಮ ನಿರ್ವಹಣೆಯನ್ನು ಮುಂದುವರಿಸಿ, ಬಂಡವಾಳವನ್ನು ರಕ್ಷಿಸಿಕೊಳ್ಳಲು ಮುಂದಿನ 2ಜಿ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆಯಲ್ಲೂ ಪಾಲ್ಗೊಳ್ಳುವ ಸಾಧ್ಯತೆಗಳಿವೆ.

ಮೂಲಗಳ ಪ್ರಕಾರ, ದೂರಸಂಪರ್ಕ ಸಚಿವಾಲಯವು ಇನ್ನೊಂದು ವಾರದೊಳಗೆ ಪರವಾನಗಿ ರದ್ಧತಿಗೆ ಸಂಬಂಧಿಸಿದಂತೆ ಹೊಸ ನಿರ್ವಾಹಕರಿಗೆ ಪತ್ರಗಳನ್ನು ಕಳುಹಿಸುವ ನಿರೀಕ್ಷೆಯಿದೆ. ಈ ಬಗ್ಗೆ ಈಗಾಗಲೇ ದೂರಸಂಪರ್ಕ ಇಲಾಖೆಯ ಆಂತರಿಕ ಸಭೆಯಲ್ಲಿ ಚರ್ಚಿಸಲಾಗಿದೆ. ಲೈಸೆನ್ಸ್ ಒಪ್ಪಂದ ರದ್ಧತಿ ಮತ್ತು ಅನರ್ಹವೆಂದು ಘೋಷಿಸಲ್ಪಟ್ಟ 35 ಲೈಸೆನ್ಸ್‌ಗಳ ಶುಲ್ಕ ವಾಪಸಾತಿ ಹಾಗೂ ಉಳಿದ 37 ಲೈಸೆನ್ಸ್‌ಗಳಿಗೆ ಸಂಬಂಧಿಸಿದಂತೆ ಮಾಹಿತಿ ಪತ್ರಗಳ ರವಾನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸದಸ್ಯರು ಸಭೆಯಲ್ಲಿ ಚರ್ಚಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT