ADVERTISEMENT

ಸ್ಫೋಟ: ಸಿಗದ ಖಚಿತ ಸುಳಿವು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2011, 19:15 IST
Last Updated 8 ಸೆಪ್ಟೆಂಬರ್ 2011, 19:15 IST
ಸ್ಫೋಟ: ಸಿಗದ ಖಚಿತ ಸುಳಿವು
ಸ್ಫೋಟ: ಸಿಗದ ಖಚಿತ ಸುಳಿವು   

ನವದೆಹಲಿ: ರಾಜಧಾನಿಯ ಆತಂಕ ಹೆಚ್ಚಿಸಿರುವ `ಹೈಕೋರ್ಟ್ ಬಾಂಬ್ ಸ್ಫೋಟ~ಕ್ಕೆ ಸಂಬಂಧಿಸಿದಂತೆ ಯಾವುದೇ ಖಚಿತ ಸುಳಿವು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕ್ಕೆ ಸಿಗದಿರುವುದರಿಂದ ತನಿಖೆಯಲ್ಲಿ ಹೇಳಿಕೊಳ್ಳುವಂಥ ಪ್ರಗತಿ ಆಗಿಲ್ಲ. ಕೇವಲ ಸಂಶಯದ ಆಧಾರದ ಮೇಲೆ ಆರೋಪಿಗಳ ಜಾಡು ಹಿಡಿಯಲು ತನಿಖಾ ತಂಡ ತೀವ್ರ ಕಸರತ್ತು ನಡೆಸುತ್ತಿದೆ.

 ಸ್ಫೋಟದ ಹೊಣೆ ಹೊತ್ತಿರುವ ಬಾಂಗ್ಲಾ ಮೂಲದ `ಹರ‌್ಕತ್-ಉಲ್ ಜಿಹಾದಿ~ (ಹುಜಿ) ಕಳುಹಿಸಿದೆ ಎನ್ನಲಾದ ಇ-ಮೇಲ್‌ಗೆ ಸಂಬಂಧಿಸಿದಂತೆ ಕಾಶ್ಮೀರದ ಮೂವರನ್ನು ತನಿಖಾ ತಂಡ ವಶಪಡಿಸಿಕೊಂಡಿರುವ ಬೆನ್ನಲ್ಲೇ, ಹೈಕೋರ್ಟ್ ಘಟನೆಗೆ ತಾನು ಹೊಣೆ ಎಂದು `ಇಂಡಿಯನ್ ಮುಜಾಹಿದ್ದೀನ್~ (ಐಎಂ) ಹೆಸರಿನಲ್ಲಿ ಹೊಸ ಇ-ಮೇಲ್ ರವಾನೆ ಆಗಿದೆ.

ಮುಂದಿನ ಬುಧವಾರ ದೆಹಲಿ  `ಮಾಲ್~ ಸ್ಫೋಟಿಸುವುದಾಗಿ ಈ ಇ-ಮೇಲ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ. ಹೊಸದಾಗಿ ಬಂದಿರುವ ಇ-ಮೇಲ್ ಅನ್ನು ಪರಿಶೀಲಿಸಲಾಗುತ್ತಿದೆ ಎಂದು ಎನ್‌ಐಎ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ನೀಡುವವರಿಗೆ ಐದು ಲಕ್ಷ ರೂಪಾಯಿ ನಗದು ಬಹುಮಾನವನ್ನು ಎನ್‌ಐಎ ಗುರುವಾರ ಘೋಷಿಸಿದೆ.

`ಹುಜಿ~ ಹೆಸರಿನಲ್ಲಿ ಬಂದಿರುವ ಇ- ಮೇಲ್ ಜಮ್ಮು- ಕಾಶ್ಮೀರದ ಕಿಸ್ತ್ವರ್ ಜಿಲ್ಲೆ `ಸೈಬರ್ ಕೆಫೆ~ ಒಂದರಿಂದ ಕಳುಹಿಸಲಾಗಿದೆ ಎಂದು ಪತ್ತೆ ಹಚ್ಚಿರುವ ತನಿಖಾ ದಳ ಅಂಗಡಿ ಮಾಲೀಕ ಸೇರಿದಂತೆ ಮೂವರನ್ನು ವಶಕ್ಕೆ ತೆಗೆದುಕೊಂಡು ಪ್ರಶ್ನಿಸುತ್ತಿದೆ.

ಸ್ಫೋಟದ ಶಂಕಿತರು ಬಳಸಿದ್ದಾರೆನ್ನಲಾದ ಪಟ್ನಾ ಮೂಲದ ಕಾರಿನ ಮಾಲೀನಿಗಾಗಿ ಹುಡುಕಾಟ ನಡೆದಿದೆ. ಕಾರು ಮಾಲೀಕನ ಮುಖ ಚಹರೆ ಪೊಲೀಸರು ಬಿಡುಗಡೆ ಮಾಡಿರುವ ರೇಖಾಚಿತ್ರ ಹೋಲುತ್ತಿದೆ. ಈ ಕಾರನ್ನು ಫರೀದಾಬಾದ್ ಬಳಿ ಪತ್ತೆ ಮಾಡಲಾಗಿದೆ.

ಉತ್ತರ ಪ್ರದೇಶದಲ್ಲೂ ಆರೋಪಿ ರೇಖಾಚಿತ್ರ ಹೋಲುವ ವ್ಯಕ್ತಿಯೊಬ್ಬನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಲ್ಲದೆ, ಕಳುವು ಮಾಡಿದ ಎಟಿಎಂ ಕಾರ್ಡ್ ಬಳಸಲು ಯತ್ನಿಸಿದ ಆರೋಪದ ಮೇಲೆ ಬಂಧಿತನಾದ ಬಿಹಾರ ಮೂಲದ ಮತ್ತೊಬ್ಬ ಆರೋಪಿಯನ್ನು ಎನ್‌ಐಎ ಪ್ರಶ್ನಿಸುತ್ತಿದೆ.

ಈ ಮಧ್ಯೆ, ಗಾಯಗೊಂಡವರ ಪೈಕಿ ಮತ್ತಿಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 13ಕ್ಕೆ ಏರಿದೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.