ADVERTISEMENT

ಸ್ವದೇಶಿ ಸಂಕ್ಷಿಪ್ತ ಸುದ್ದಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2012, 19:30 IST
Last Updated 3 ಮಾರ್ಚ್ 2012, 19:30 IST

ವಕೀಲರ ದಾಳಿ: ರಾಜ್‌ದೀಪ್ ಖಂಡನೆ
ನವದೆಹಲಿ
: ಬೆಂಗಳೂರಿನಲ್ಲಿ ಶುಕ್ರವಾರ ನ್ಯಾಯಾಲಯ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆದ ವಕೀಲರ ದಾಳಿಗೆ ಎಡಿಟರ್ಸ್‌ ಗಿಲ್ಡ್‌ನ ಮಾಜಿ ಅಧ್ಯಕ್ಷ ರಾಜ್‌ದೀಪ್ ಸರ್‌ದೇಸಾಯಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥ ವಕೀಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಸರ್ಕಾರ ಮತ್ತು ವಕೀಲರ ಸಂಘವನ್ನು ಒತ್ತಾಯಿಸಿದ್ದಾರೆ.

ಮಮತಾ ಸಂಬಂಧಿಗೆ ಜಾಮೀನು
ಕೋಲ್ಕತ್ತ: ಸಂಚಾರಿ ಪೊಲೀಸ್ ಅಧಿಕಾರಿ ಮತ್ತು ಅವರ ವಾಹನ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪಕ್ಕಾಗಿ ಬಂಧಿಸಲ್ಪಟ್ಟಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಆಕಾಶ್ ಬ್ಯಾನರ್ಜಿ ಮತ್ತು ಇತರ ಮೂವರಿಗೆ ಇಲ್ಲಿನ ನ್ಯಾಯಾಲಯವೊಂದು ಶುಕ್ರವಾರ ಜಾಮೀನು ನೀಡಿದೆ.
 ಆರೋಪಿಗಳಿಗೆ ತಲಾ 1,000 ರೂಪಾಯಿಗಳ ವೈಯಕ್ತಿಕ ಬಾಂಡ್ ಸಲ್ಲಿಕೆಯ ಮೇರೆಗೆ ಜಾಮೀನು ಮಂಜೂರು ಮಾಡಿದರು. ನ್ಯಾಯಾಲಯವು ಆಗಸ್ಟ್ 16ರಂದು ಪ್ರಕರಣದ ಮುಂದಿನ ವಿಚಾರಣೆಯನ್ನು ನಡೆಸಲಿದೆ.

ಮಸೂದ್ ಹತ್ಯೆ: ಫಾರೂಕಿ ಸಿಬಿಐ ವಶಕ್ಕೆ
ಇಂದೋರ್ (ಪಿಟಿಐ): ಮಾಹಿತಿ ಹಕ್ಕು ಕಾರ್ಯಕರ್ತೆ ಶೆಹ್ಲಾ ಮಸೂದ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಭೋಪಾಲ್‌ನಲ್ಲಿ ಬಂಧಿಸಲಾಗಿದ್ದ ಶಂಕಿತ ಆರೋಪಿ ಸಾಬಾ ಫಾರೂಕಿಯನ್ನು ಶನಿವಾರ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. 

 ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಮಾರ್ಚ್ 6ರವರೆಗೆ ಆರೋಪಿಯನ್ನು ಸಿಬಿಐ ವಶಕ್ಕೆ ಒಪ್ಪಿಸಿತು. ಆಗಸ್ಟ್‌ನಲ್ಲಿ ಶೆಹ್ಲಾಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. 
  
ಪಂಜಾಬ್ ಕಾಂಗ್ರೆಸ್‌ಗೆ ಬಹುಮತ?

ನವದೆಹಲಿ (ಪಿಟಿಐ):177 ಸ್ಥಾನಗಳ ಪಂಜಾಬ್ ವಿಧಾನಸಭೆಯಲ್ಲಿ ಇಂಟಿಯಾ ಟಿವಿ-ಸಿ ಮತಗಟ್ಟೆ ಸಮೀಕ್ಷೆಯು ಕಾಂಗ್ರೆಸ್‌ಗೆ ಬಹುಮತದ 65 ಸ್ಥಾನಗಳನ್ನು ಗಳಿಸುವ ಭವಿಷ್ಯ ನುಡಿದಿದೆ. ಸಿಎನ್‌ಎಸ್-ಐಬಿಎನ್ ಮತ್ತು ದಿ ವೀಕ್ ಸಮೀಕ್ಷೆಯು ಆಡಳಿತಾರೂಢ ಶಿರೋಮಣಿ ಅಕಾಲಿದಳ-ಬಿಜೆಪಿ ಮೈತ್ರಿಕೂಟ 51-63 ಸ್ಥಾನ ಗಳಿಸುವುದಾಗಿ ತಿಳಿಸಿದೆ.

ಉತ್ತರಾಖಂಡ ಅತಂತ್ರ: 70 ಸ್ಥಾನಗಳ ಉತ್ತರಾಖಂಡದಲ್ಲಿ ಸಿಎನ್‌ಎನ್-ಐಬಿಎನ್ ಸಮೀಕ್ಷೆ ಕಾಂಗ್ರೆಸ್‌ಗೆ 31-41 ಸ್ಥಾನಗಳನ್ನು ಮತ್ತು ನ್ಯೂಸ್ 24 ಸಮೀಕ್ಷೆ ಆಡಳಿತಾರೂಢ ಬಿಜೆಪಿ ದೊಡ್ಡ ಪಕ್ಷವಾಗಿ 30 ಸ್ಥಾನಗಳನ್ನು ಮತ್ತು ವಿರೋಧಿ ಕಾಂಗ್ರೆಸ್ 28 ಸ್ಥಾನಗಳನ್ನು ಗಳಿಸುವ ಮೂಲಕ ಅತಂತ್ರ ವಿಧಾನಸಬೆ ನಿರ್ಮಾಣವಾಗುವುದಾಗಿ ಹೇಳಿದೆ.


ಕೂಡುಂಕುಳಂ ಯೋಜನೆ: ಶೀಘ್ರ ಆರಂಭ

ಚೆನ್ನೈ (ಪಿಟಿಐ): ತಮಿಳುನಾಡು ಎದುರಿಸುತ್ತಿರುವ ತೀವ್ರ ವಿದ್ಯುತ್ ಕೊರತೆಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಕೂಡುಂಕುಳಂ ಅಣುವಿದ್ಯುತ್ ಯೋಜನೆ ಶೀಘ್ರ ಕಾರ್ಯಾರಂಭ ಮಾಡಲಿದೆ ಎಂದು ಪ್ರಧಾನಿ ಕಚೇರಿಯ ರಾಜ್ಯ ಸಚಿವ ವಿ.ನಾರಾಯಣ ಸ್ವಾಮಿ ಅವರು ಶನಿವಾರ ವಿಶ್ವಾಸ ವ್ಯಕ್ತಪಡಿಸಿದೆ.

ಕುಶಾವ, ಬಿಎಸ್‌ಪಿ ಶಾಸಕನ ಬಂಧನ

ನವದೆಹಲಿ (ಪಿಟಿಐ): ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಯೋಜನೆಯಲ್ಲಿ ನಡೆದಿರುವ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮಾಜಿ ಸಚಿವ ಬಾಬುಸಿಂಗ್ ಕುಶಾವ ಮತ್ತು ಬಿಎಸ್‌ಪಿ ಶಾಸಕ ರಾಮ್ ಪ್ರಸಾದ ಜೈಸ್ವಾಲ್ ಅವರನ್ನು ಸಿಬಿಐ ಶನಿವಾರ ಬಂಧಿಸಿದೆ. ಇಲ್ಲಿನ ಮುಖ್ಯ ಕಚೇರಿಗೆ ಕರೆಸಿಕೊಂಡು ಸತತ ನಾಲ್ಕು ತಾಸುಗಳ ಕಾಲ ವಿಚಾರಣೆಗೊಳಪಡಿಸಿದ ಇಬ್ಬರನ್ನೂ ಬಂಧಿಸಲಾಯಿತು ಎಂದು ಸಿಬಿಐ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.