ADVERTISEMENT

ಸ್ವಯಂಪ್ರೇರಿತ ದೂರು ದಾಖಲಿಸಿದ ಸುಪ್ರೀಂ

ಠಾಣೆಯಲ್ಲಿ ಬಾಲಕಿ ಕೂಡಿಟ್ಟ ಪ್ರಕರಣ: ಸರ್ಕಾರಕ್ಕೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 19:59 IST
Last Updated 10 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ಅತ್ಯಾಚಾರ ನಡೆಸಿದ ಯುವಕನ ವಿರುದ್ಧ ಠಾಣೆಗೆ ದೂರು ನೀಡಲು ಹೋದ ಹತ್ತು ವರ್ಷದ ಬಾಲಕಿಯನ್ನು ಅಕ್ರಮವಾಗಿ ಕೂಡಿ ಹಾಕಿದ ಬುಲಂದ್‌ಶಹರ್ ಮಹಿಳಾ ಠಾಣೆಯ ಪೊಲೀಸರ ಅಮಾನವೀಯ ಕೃತ್ಯದ ಬಗ್ಗೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವ ಸುಪ್ರೀಂಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಘಟನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ನೇತೃತ್ವದ ನ್ಯಾಯಪೀಠ, ಹತ್ತು ವರ್ಷದ ಬಾಲಕಿಯನ್ನು ಹೇಗೆ ಪೊಲೀಸರು ವಶಕ್ಕೆ ತೆಗೆದುಕೊಂಡರು ಎಂದು ಖಾರವಾಗಿ ಪ್ರಶ್ನಿಸಿದೆ. ಸೋಮವಾರ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲಿದ್ದು ಅಂದು ವಿವರಣೆ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.

ಭಾನುವಾರ ಮನೆಯ ಹತ್ತಿರದ ಅಂಗಡಿಗೆ ತೆರಳಿದ್ದ ಬಾಲಕಿಯನ್ನು 24 ವರ್ಷದ ಯುವಕ ಕರೆದೊಯ್ದು ಅತ್ಯಾಚಾರ ನಡೆಸಿ ಪರಾರಿಯಾಗಿದ್ದ. ಈ ಬಗ್ಗೆ ದೂರು ನೀಡಲು ತನ್ನ ಪೋಷಕರೊಂದಿಗೆ ಮಹಿಳಾ ಠಾಣೆಗೆ ತೆರಳಿದ್ದ ಬಾಲಕಿಯನ್ನು ಪೊಲೀಸರು ಅಕ್ರಮವಾಗಿ ಕೂಡಿ ಹಾಕಿದ್ದರು.

ಘಟನೆಯ ಕುರಿತು ಸ್ಥಳೀಯ ಸುದ್ದಿವಾಹಿನಿಯೊಂದು ಬಿತ್ತರಿಸಿದ ವರದಿಯಿಂದ ಎಚ್ಚೆತ್ತುಕೊಂಡ ಸರ್ಕಾರ ಸೋಮವಾರ ನಾಲ್ವರು ಸಿಬ್ಬಂದಿಯನ್ನು ಅಮಾನತುಗೊಳಿಸಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಆರೋಪಿಯನ್ನು ಬಂಧಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.