ADVERTISEMENT

ಸ್ವಯಂ ಪ್ರೇರಿತ ಭೂ ಬ್ಯಾಂಕ್

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 19:30 IST
Last Updated 7 ಜನವರಿ 2012, 19:30 IST

ನವದೆಹಲಿ: ಉದ್ದಿಮೆಗಳಿಗೆ ಭೂಮಿ ಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆಗೆ ರೈತರಿಂದ ವಿರೋಧ- ಪ್ರತಿಭಟನೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ `ಸ್ವಯಂ ಪ್ರೇರಿತ ಭೂ ಬ್ಯಾಂಕ್~ ಯೋಜನೆ ಜಾರಿಗೆ ತರಲು ರಾಜ್ಯ ಸರ್ಕಾರ ಉದ್ದೇಶಿಸಿದೆ.

ರಾಜ್ಯ ಸರ್ಕಾರ ಪ್ರತಿ ಜಿಲ್ಲೆಯಲ್ಲೂ `ಸ್ವಯಂ ಪ್ರೇರಿತ ಭೂ ಬ್ಯಾಂಕ್~ ಸ್ಥಾಪಿಸುತ್ತಿದೆ. ಜಿಲ್ಲೆಯಲ್ಲಿ ಬರಲಿರುವ ಉದ್ದಿಮೆಗಳು, ಅಗತ್ಯವಿರುವ ಭೂಮಿ ಕುರಿತು ಕೈಗಾರಿಕಾ ಅಭಿವೃದ್ಧಿ ಮಂಡಳಿ ಸದ್ಯದಲ್ಲೇ ಜಾಹಿರಾತು ನೀಡಲಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸ್ವಯಂ ಪ್ರೇರಿತವಾಗಿ ಭೂಮಿ ಕೊಡಲು ಮುಂದೆ ಬರುವ ರೈತರಿಗೆ ಉತ್ತಮ ಪರಿಹಾರ ವಿತರಿಸಲಾಗುವುದು. ಒಣಭೂಮಿ, ನೀರಾವರಿ ಅಥವಾ ಕೃಷಿ ಯೋಗ್ಯವಲ್ಲದ ಭೂಮಿ ಯಾವುದೇ ಇದ್ದರೂ ಮಾರುಕಟ್ಟೆ ಹಾಗೂ ಉಪ ನೋಂದಣಾಧಿಕಾರಿ ಕಚೇರಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಪರಿಹಾರ ಕೊಡಲಾಗುವುದು ಎಂದರು.

ಗದಗ ಜಿಲ್ಲೆ ಹಳ್ಳಿಗುಡಿಯಲ್ಲಿ ಪೋಸ್ಕೊ ಉಕ್ಕು ಉದ್ದಿಮೆಗೆ ಭೂ ಸ್ವಾಧೀನ ಪ್ರಕ್ರಿಯೆಗೆ ರೈತರ ಪ್ರತಿಭಟನೆ ವ್ಯಕ್ತವಾದ ಬಳಿಕ ಸರ್ಕಾರ ಬಲವಂತದ ಭೂ ಸ್ವಾಧೀನ  ಪ್ರಕ್ರಿಯೆ ಸ್ಥಗಿತಗೊಳಿಸಿದೆ. ಇದಕ್ಕೂ ಮೊದಲು ಜಾರಿಗೆ ತಂದಿದ್ದ ಭೂ ಬ್ಯಾಂಕ್‌ಗೆ 1.5 ಲಕ್ಷ ಎಕರೆ ಸ್ವಾಧೀನ ಮಾಡಿಕೊಳ್ಳಲು ಉದ್ದೇಶಿಸಲಾಗಿತ್ತು. 60 ಸಾವಿರ ಎಕರೆ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಸರ್ಕಾರದ ಭೂ ಬ್ಯಾಂಕಿನಲ್ಲಿ 40ಸಾವಿರ ಎಕರೆ ಭೂಮಿ ಇದೆ. 1200ಕೋಟಿ ಮೊತ್ತದ 1.19ಲಕ್ಷ ಎಕರೆ ಜಮೀನನ್ನು ಕೈಗಾರಿಕಾ ಅಭಿವೃದ್ಧಿ ಮಂಡಳಿ ಗುರುತಿಸಿದೆ.

ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಭೂ ಸ್ವಾಧೀನಕ್ಕೆ ರೈತರಿಂದ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊಸ ಭೂ ಸ್ವಾಧೀನ ಮಸೂದೆ ರೂಪಿಸಿದ್ದು, ಸಂಸತ್ತಿನ ಒಪ್ಪಿಗೆ ಪಡೆಯಬೇಕಾಗಿದೆ. ಮಸೂದೆಗೆ ಸಂಪುಟದ ಅನುಮೋದನೆ ದೊರೆತಿದ್ದು, ಸಂಸತ್ತಿನ ಸ್ಥಾಯಿ ಸಮಿತಿ ಪರಿಶೀಲನೆಗೆ ಕಳುಹಿಸಲಾಗಿದೆ. ಈಚೆಗೆ ಕೆಲ ಪ್ರತಿಷ್ಠಿತ ಉದ್ದಿಮೆದಾರರು ಪ್ರಧಾನಿ ಮನಮೋಹನ್‌ಸಿಂಗ್ ಅವರನ್ನು ಭೇಟಿಯಾಗಿ ಉದ್ಯಮಗಳಿಗೆ ಭೂಮಿ ದೊರೆಯದ ಕುರಿತು ವಿವರಿಸಿದ್ದರು. ತಕ್ಷಣ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಲು ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.