ADVERTISEMENT

ಹಂಪಿ ದತ್ತು ಪಡೆದ ಯಾತ್ರಾ ಡಾಟ್‌ ಕಾಂ

ಪಾರಂಪರಿಕ ತಾಣಗಳ ದತ್ತು ಅಭಿಯಾನ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 4:15 IST
Last Updated 26 ಅಕ್ಟೋಬರ್ 2017, 4:15 IST
ಹಂಪಿಯ ಕಲ್ಲಿನ ರಥ
ಹಂಪಿಯ ಕಲ್ಲಿನ ರಥ   

ನವದೆಹಲಿ: ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಹಂಪಿಯ ನಿರ್ವಹಣೆಯ ಹೊಣೆಯನ್ನು ಆನ್‌ಲೈನ್ ಪ್ರವಾಸ ನಿರ್ವಹಣಾ ಸಂಸ್ಥೆ ಯಾತ್ರಾ  ಡಾಟ್‌ ಕಾಂ ಪಡೆದುಕೊಂಡಿದೆ.

ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಸೆಪ್ಟೆಂಬರ್ 27ರಂದು ಆರಂಭಿಸಿದ್ದ ‘ಪಾರಂಪರಿಕ ತಾಣಗಳನ್ನು ದತ್ತು ಪಡೆಯಿರಿ’ ಅಭಿಯಾನದ ಅಂಗವಾಗಿ ಯಾತ್ರಾ ಡಾಟ್‌ ಕಾಂ ಹಂಪಿಯ ನಿರ್ವಹಣೆಯನ್ನು ದತ್ತು ಪಡೆದಿದೆ. ಇದೇ ಸಂಸ್ಥೆ ಮಹಾರಾಷ್ಟ್ರದ ಅಜಂತಾ ಎಲ್ಲೋರಾ ಗುಹೆಗಳು, ದೆಹಲಿಯ ಕುತುಬ್ ಮಿನಾರ್ ಮತ್ತು ಲೇಹ್ ಅರಮನೆಯ ನಿರ್ವಹಣೆಯನ್ನು ದತ್ತು ಪಡೆದುಕೊಂಡಿದೆ.

‘ಈ ಅಭಿಯಾನಕ್ಕೆ ಭಾರಿ ಪ್ರಮಾಣದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ಕಂಪೆನಿಗಳು ಸುಮಾರು 50 ಪ್ರಸ್ತಾವಗಳನ್ನು ಸಲ್ಲಿಸಿದ್ದವು. ಅವುಗಳಲ್ಲಿ ಎಂಟು ಪ್ರಸ್ತಾವಗಳಿಗೆ ಒಪ್ಪಿಗೆ ಸೂಚಿಸಿದ್ದೇವೆ. ಪಾರಂಪರಿಕ ಸ್ಥಳಗಳ ನಿರ್ವಹಣೆಯನ್ನು ದತ್ತು ನೀಡುವ ಮುನ್ನ ಪ್ರವಾಸೋದ್ಯಮ ಸಚಿವಾಲಯ, ಭಾರತೀಯ ಪುರಾತತ್ವ ಇಲಾಖೆ ಮತ್ತು ಪ್ರಸ್ತಾವ ಸಲ್ಲಿಸಿರುವ ಕಂಪೆನಿಯ ಮಧ್ಯೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ’ ಎಂದು ಪ್ರವಾಸೋದ್ಯಮ ಸಚಿವಾಲಯದ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

ADVERTISEMENT

‘ಮೊದಲ ಹಂತದಲ್ಲಿ ಪಾರಂಪರಿಕ ತಾಣಗಳ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವ ಹೊಣೆಯನ್ನಷ್ಟೇ ಈ ಕಂಪೆನಿಗಳಿಗೆ ನೀಡಲಾಗುತ್ತದೆ. ಬಳಿಕ, ಅವು ತಮ್ಮ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಿವೆ ಎಂಬುದನ್ನು ವಿಶ್ಲೇಷಿಸಲಾಗುತ್ತದೆ. ಆನಂತರ ಆ ಪಾರಂಪರಿಕ ತಾಣದಲ್ಲಿ ಆಯಾ ಕಂಪೆನಿಗಳು ಬೇರೆ ಯಾವ ಅಭಿವೃದ್ಧಿ ಕಾರ್ಯಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ಪರಿಶೀಲಿಸಲಾಗುತ್ತದೆ’ ಎಂದು ಅವರು ವಿವರಿಸಿದ್ದಾರೆ.

ಯಾವ ತಾಣಗಳು ಯಾರ ನಿರ್ವಹಣಿಗೆ :

ಟಿ.ಕೆ.ಇಂಟರ್‌ನ್ಯಾಷನಲ್ ಲಿಮಿಟೆಡ್-

ಕೋನಾರ್ಕ್‌ನ ಸೂರ್ಯ ದೇವಾಲಯ

ಭುವನೇಶ್ವರದ ರಾಜಾರಾಣಿ ದೇವಾಲಯ

ರತ್ನಗಿರಿ ಬೌದ್ಧ ಸ್ಮಾರಕ

ಎಸ್‌ಬಿಐ ಪ್ರತಿಷ್ಠಾನ-

ದೆಹಲಿಯ ಜಂತರ್‌ ಮಂತರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.