ADVERTISEMENT

ಹಜಾರೆ, ಕೇಜ್ರಿವಾಲ್‌ ವಿರುದ್ಧದ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 12:57 IST
Last Updated 10 ಡಿಸೆಂಬರ್ 2013, 12:57 IST

ನವದೆಹಲಿ (ಪಿಟಿಐ): ‘ಅಣ್ಣಾ ಎಸ್‌ಎಂಎಸ್‌ ಕಾರ್ಡ್’ಗಳನ್ನು ಮಾರಾಟ ಮಾಡುವ ಮೂಲಕ ನಾಲ್ಕು ಕೋಟಿಗೂ ಅಧಿಕ ಜನರನ್ನು ಮೋಸ ಮಾಡಿರುವ ಅಣ್ಣಾ ಹಜಾರೆ, ಅರವಿಂದ್‌ ಕೇಜ್ರಿವಾಲ್‌ ಹಾಗೂ ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ದೆಹಲಿ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.

ಪ್ರಕರಣ ಸಂಬಂಧ ದೆಹಲಿ ಪೊಲೀಸರು ಅವರಿಗೆ ‘ಕ್ಲೀನ್‌ ಚಿಟ್‌’ ನೀಡಿದ ಬೆನ್ನಲ್ಲೆ ಕೋರ್ಟ್ ಈ ಕ್ರಮಕೈಗೊಂಡಿದೆ.

‘ಯಾವುದೇ ತಪ್ಪು ನಡೆದಿಲ್ಲ ಹಾಗೂ ಪೊಲೀಸ್‌ ಕ್ರಮದ ಅಗತ್ಯವಿಲ್ಲ’ ಎಂದು ಪೊಲೀಸರು ಹೇಳಿದ ನಂತರ ಕೇಜ್ರಿವಾಲ್‌ ನೇತೃತ್ವದ ಭ್ರಷ್ಟಾಚಾರ ವಿರೋಧಿ ಭಾರತ (ಐಎಸಿ) ಸಂಘಟನೆಯ ಕಾರ್ಯಕರ್ತ ಎಂದು ಹೇಳಿಕೊಂಡಿದ್ದ ದೆಹಲಿ ನಿವಾಸಿ ರುಮಾಲ್‌ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಆಕಾಶ್ ಜೈನ್ ವಜಾಗೊಳಿಸಿದರು.

ADVERTISEMENT

ಹಜಾರೆ ನೇತೃತ್ವ ಹೋರಾಟದ ರೂಪುರೇಷೆಗಳ ಬಗ್ಗೆ ವರ್ಷವಿಡಿ ಮಾಹಿತಿ ನೀಡುವ ಭರವಸೆಯೊಂದಿಗೆ 2012ರ ಫೆಬ್ರುವರಿಯಲ್ಲಿ ಸಿಮ್‌ ಕಾರ್ಡ್‌ಗಳನ್ನು ಪರಿಚಯಿಸುವ ಮೂಲಕ ಹಜಾರೆ ಹಾಗೂ ಅವರ ಮಾಜಿ ತಂಡ 100 ಕೋಟಿ ರೂಪಾಯಿ ಆದಾಯ ಗಳಿಸಿದೆ. ಆದರೆ ಯಾವುದೇ ಸಕಾರಣಗಳನ್ನು ನೀಡದೇ ಅವರ ತಂಡ ಅವಧಿಗೂ ಮುನ್ನವೇ ಮೊಟಕುಗೊಳಿಸಿದೆ ಎಂದು ಸಿಂಗ್ ಆರೋಪಿಸಿದ್ದರು.

ಹಜಾರೆ ಹಾಗೂ ಅವರ ಮಾಜಿ ತಂಡದವರು ಯಾವುದೇ ತಪ್ಪುಗಳನ್ನೆಸಗಿಲ್ಲ ಎಂದು ದೆಹಲಿ ಪೊಲೀಸರು ಮಂಗಳವಾರ ‘ಕ್ರಮ ಕೈಗೊಂಡ ವರದಿ (ಎಟಿಆರ್)’ಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಅಲ್ಲದೇ ಅರ್ಜಿದಾರ ಗ್ರಾಹಕ ನ್ಯಾಯಾಲಯದ ಮೊರೆ ಹೋಗಬಹುದು.ಜೊತೆಗೆ ಅವರು ವಿಚಾರಣೆಯಲ್ಲಿ ಸಹಕರಿಸುತ್ತಿಲ್ಲ ಎಂದೂ ಅವರು  ಎಟಿಆರ್‌ನಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.