ನವದೆಹಲಿ (ಐಎಎನ್‌ಎಸ್): ಹತ್ತಿ ಹಾಗೂ ಸಕ್ಕರೆ ಮೇಲಿನ ನಿರ್ಬಂಧ ರೈತರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಕಳವಳ ವ್ಯಕ್ತಪಡಿಸಿದ್ದು, ಈ ಸಂಬಂಧ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.
ಆಹಾರ ಮತ್ತು ಜವಳಿ ಸಚಿವಾಲಯದ ನಡವಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ಪವಾರ್, ಈ ಎರಡೂ ಇಲಾಖೆಗಳ ನೀತಿಗಳು ರೈತರ ಹಿತಾಸಕ್ತಿಗೆ ಮಾರಕವಾಗಿದೆ ಎಂದರು.
ಈ ವರ್ಷ ಹತ್ತಿ ರಫ್ತಿನ ಕೋಟಾವನ್ನು 1.3 ಕೋಟಿ ಟನ್ ಬೇಲ್‌ಗಳಿಗೆ ನಿರ್ಬಂಧಿಸಿ, ಸಚಿವರ ಗುಂಪು ಸೋಮವಾರ ಆದೇಶ ಹೊರಡಿಸಿದ ಮಾರನೇ ದಿನವೇ ಪವಾರ್ ಈ ಪತ್ರ ಬರೆದಿದ್ದಾರೆ.
ಜವಳಿ ಮಿಲ್‌ಗಳಿಗೆ ನೀಡುವ ಸಹಾಯಧನದ ಹೊರೆಯನ್ನು ಹತ್ತಿ ಬೆಳೆಯುವ ರೈತರು ಹೊತ್ತುಕೊಳ್ಳುವಂತೆ ಕೇಳಬಾರದು ಎಂದು ಹೇಳಿರುವ ಪವಾರ್, ಈ ನಿರ್ಬಂಧದಿಂದ ಜವಳಿ ಗಿರಣಿಗಳಿಗೆ ಲಾಭವಾಗಲಿದೆ ಎಂದು ಸೂಚ್ಯವಾಗಿ ಹೇಳಿದ್ದಾರೆ.
ಹತ್ತಿ ರಫ್ತಿನ ಮೇಲಿನ ನಿರ್ಬಂಧವನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸಹ ವಿರೋಧಿಸಿದ್ದಾರೆ.
ಸಕ್ಕರೆ ರಫ್ತಿನ ಕುರಿತಾಗಿಯೂ ಕೃಷಿ ಸಚಿವರು ಆತಂಕ ವ್ಯಕ್ತಪಡಿಸಿದ್ದು, ಈ ವರ್ಷ 10 ಲಕ್ಷ ಟನ್ ಸಕ್ಕರೆ ರಫ್ತಿಗೆ ಅವಕಾಶ ನೀಡುವ ನಿರ್ಧಾರವನ್ನು ಮಾರ್ಚ್ 26ರಂದೇ ತೆಗೆದುಕೊಳ್ಳಲಾಗಿದ್ದರೂ ಆಹಾರ ಸಚಿವಾಲಯದ ಈ ಸಂಬಂಧ ಆದೇಶ ಹೊರಡಿಸಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಮೇಲೆ ಒತ್ತಡ ಹೇರುವುದು ಶರದ್ ಪವಾರ್ ತಂತ್ರವಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.