ADVERTISEMENT

ಹಲ್ಲೆ ಭೀತಿ: ಕೇಜ್ರಿವಾಲ್

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2011, 19:30 IST
Last Updated 16 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಅಣ್ಣಾ ಹಜಾರೆ ತಂಡದ ಸದಸ್ಯ ಅರವಿಂದ ಕೇಜ್ರಿವಾಲ್ ಭಾನುವಾರ ಹೇಳಿಕೆಯೊಂದನ್ನು ನೀಡಿ, ತಮ್ಮ ಮೇಲೆ ಹಲ್ಲೆ ಮತ್ತು ತಮ್ಮ ಕಚೇರಿ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭಿಸಿದೆ ಎಂದಿದ್ದಾರೆ.

 ಹಲ್ಲೆ ನಡೆಯಬಹುದು ಎಂಬ ಬಗ್ಗೆ ಕಳೆದ ಎರಡು ದಿನಗಳಿಂದ ಟಿವಿ ಸುದ್ದಿ ಚಾನೆಲ್‌ನ ಪತ್ರಕರ್ತರೂ ಸೇರಿದಂತೆ ಮಾಧ್ಯಮದಲ್ಲಿನ ಗೆಳೆಯರಿಂದ ತಮಗೆ ಅನೇಕ ಕರೆಗಳು ಬಂದಿವೆ ಎಂದು ಅವರು ಹೇಳಿದ್ದಾರೆ.

ಆದರೆ ವೈಯಕ್ತಿಕವಾಗಿ ತಮಗೆ ಯಾವುದೇ ಬೆದರಿಕೆ ಕರೆ ಅಥವಾ ಸಂದೇಶ ಬಂದಿಲ್ಲ ಎಂದು ತಿಳಿಸಿದ್ದಾರೆ.
ಅಣ್ಣಾ ತಂಡದ ಮತ್ತೊಬ್ಬ ಸದಸ್ಯ ಮತ್ತು ವಕೀಲ ಪ್ರಶಾಂತ್ ಭೂಷಣ್ ಅವರ ಮೇಲೆ ಕಳೆದ ವಾರ ಅವರ ಕಚೇರಿಯಲ್ಲಿ ಹಲ್ಲೆ ಮಾಡಲಾಗಿತ್ತು. ಕಾಶ್ಮೀರ ಬಗ್ಗೆ ಜನಮತಗಣನೆ ನಡೆಸಬೇಕೆಂದು ನೀಡಿದ್ದ ಹೇಳಿಕೆಯೇ ಅವರ ಮೇಲಿನ ಹಲ್ಲೆಗೆ ಕಾರಣವೆಂದು ಹೇಳುತ್ತಿದ್ದರೂ, ಘಟನೆ ಹಿಂದೆ `ಪಿತೂರಿ~ ಇದೆ ಎಂದು ಅಣ್ಣಾ ತಂಡ ಭಾವಿಸಿದೆ.

ADVERTISEMENT

ಭ್ರಷ್ಟಾಚಾರ ವಿಷಯದಿಂದ ಬೇರೆಡೆಗೆ ಗಮನ ಹರಿಸುವಂತೆ ಮಾಡುವ ಯತ್ನ ಇದು ಎಂದಿದ್ದ ಕೇಜ್ರಿವಾಲ್ ಪೊಲೀಸರು ಕೈಗೊಂಡ ಕ್ರಮದ ಬಗ್ಗೆ ಪ್ರಶ್ನಿಸಿದ್ದರು ಅಲ್ಲದೆ ಹಲ್ಲೆಕೋರರ ವಿರುದ್ಧ ಪೊಲೀಸರು ತ್ವರಿತವಾಗಿ ಕ್ರಮ ಕೈಗೊಳ್ಳಲಿಲ್ಲ ಎಂದೂ ಆರೋಪಿಸಿದ್ದರು ಹಾಗೂ ಈ ರೀತಿ ಮಾಡಲು `ಉನ್ನತ ಮೂಲಗಳಿಂದ ಸೂಚನೆಯೇನಾದರೂ~ ಇತ್ತೇ ಎಂಬ ಸಂಶಯ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.