ADVERTISEMENT

ಹಳೆಯದನ್ನು ಮರೆತು ಮುಂದೆ ಸಾಗೋಣ

2019ರ ಲೋಕಸಭಾ ಚುನಾವಣೆಗೆ ಉತ್ತರ ಪ್ರದೇಶದಲ್ಲಿ ಮಹಾಮೈತ್ರಿಕೂಟ: ಮಾಯಾವತಿಗೆ ಅಖಿಲೇಶ್‌ ವಿನಂತಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2018, 19:30 IST
Last Updated 15 ಮಾರ್ಚ್ 2018, 19:30 IST
ಹಳೆಯದನ್ನು ಮರೆತು ಮುಂದೆ ಸಾಗೋಣ
ಹಳೆಯದನ್ನು ಮರೆತು ಮುಂದೆ ಸಾಗೋಣ   

ಲಖನೌ: 2019ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಮಹಾಮೈತ್ರಿಕೂಟ ರೂಪುಗೊಳ್ಳಬಹುದು ಎಂಬ ಸುಳಿವನ್ನು ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ನೀಡಿದ್ದಾರೆ. ‘ಹಳೆಯದನ್ನು ಮರೆಯುವಂತೆ’ ಮಾಯಾವತಿ ಅವರನ್ನು ಅಖಿಲೇಶ್‌ ಕೇಳಿಕೊಂಡಿದ್ದಾರೆ.

‘ಮುಂದಕ್ಕೆ ಸಾಗುವುದಕ್ಕಾಗಿ ನಾವು ಕೆಲವೊಮ್ಮೆ ಹಿಂದಿನದನ್ನು ಮರೆಯಬೇಕಾಗುತ್ತದೆ’ ಎಂದು ಮಹಾಮೈತ್ರಿ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. 1995ರಲ್ಲಿ ಉತ್ತರ ಪ್ರದೇಶದಲ್ಲಿ ಎಸ್‌ಪಿ–ಬಿಎಸ್‌ಪಿ ಮೈತ್ರಿ ಸರ್ಕಾರ ಇತ್ತು. ಆ ಸಂದರ್ಭದಲ್ಲಿ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರಿಗೆ ಎಸ್‌ಪಿ ಕಾರ್ಯಕರ್ತರು ಎಂದು ಹೇಳಿಕೊಂಡವರು ಮುತ್ತಿಗೆ ಹಾಕಿದ್ದರು. ಬಳಿಕ ಮಾಯಾವತಿ ಅವರು ಮೈತ್ರಿ ಮುರಿದುಕೊಂಡಿದ್ದರು.

2019ರ ಚುನಾವಣೆಗಾಗಿ ಮಾಡಿಕೊಳ್ಳುವ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ ಪಕ್ಷವನ್ನೂ ಜತೆಗೆ ಸೇರಿಸಿಕೊಳ್ಳಲು ತಮಗೆ ಅಭ್ಯಂತರ ಇಲ್ಲ ಎಂದು ಅಖಿಲೇಶ್‌ ತಿಳಿಸಿದ್ದಾರೆ. ‘ಕಾಂಗ್ರೆಸ್‌ ಜತೆಗೆ ನಮ್ಮ ಗೆಳೆತನ ಮುಂದುವರಿಯಲಿದೆ. ನಾವಿಬ್ಬರೂ (ರಾಹುಲ್‌ ಮತ್ತು ಅಖಿಲೇಶ್‌) ಯುವಕರು. ದೇಶ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಹೋಗಲಾಡಿಸಲು ಜತೆಗೆ ಕೆಲಸ ಮಾಡಬೇಕಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

2017ರ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಪಿ ಮತ್ತು ಕಾಂಗ್ರೆಸ್‌ ಮೈತ್ರಿಕೂಟ ಮಾಡಿಕೊಂಡಿದ್ದವು. ಆದರೆ ಚುನಾವಣೆಯಲ್ಲಿ ಅದು
ಯಶಸ್ವಿಯಾಗಿರಲಿಲ್ಲ.

ಗೋರಖಪುರ ಮತ್ತು ಫೂಲ್ಪುರ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಎಸ್‌ಪಿ ಗೆದ್ದ ಬಳಿಕ ಮಾಯಾವತಿ ಅವರ ಮನೆಗೆ ಹೋಗಿ ಅವರಿಗೆ ಅಖಿಲೇಶ್‌ ಕೃತಜ್ಞತೆ ಸಲ್ಲಿಸಿದ್ದರು.

ಉಪಚುನಾವಣೆಯಲ್ಲಿ ಎಸ್‌ಪಿಗೆ ಬಿಎಸ್‌ಪಿ ಬೆಂಬಲ ನೀಡಿತ್ತು.

ಮತಯಂತ್ರಗಳು ದೋಷಪೂರಿತವಾಗಿಲ್ಲದೇ ಇದ್ದಿದ್ದರೆ ಎರಡೂ ಕ್ಷೇತ್ರಗಳಲ್ಲಿ ಗೆಲುವಿನ ಅಂತರ ಇನ್ನಷ್ಟು ಹೆಚ್ಚಿರುತ್ತಿತ್ತು ಎಂದು ಅಖಿಲೇಶ್‌ ಹೇಳಿದ್ದಾರೆ. ಬಿಜೆಪಿ ಸೋಲಿನಿಂದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬಳಸುವ ಭಾಷೆಯಲ್ಲಿ ಬದಲಾವಣೆ ಆಗಬಹುದು ಎಂದು ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
***
ಯೋಗಿ ವಿರುದ್ಧ ಆಕ್ರೋಶ
ತ್ರಿಪುರಾದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ರೂವಾರಿ ಎಂದು ಶ್ಲಾಘನೆಗೆ ಒಳಗಾಗಿದ್ದ ಯೋಗಿ ಆದಿತ್ಯನಾಥ ಅವರ ವಿರುದ್ಧ ಉಪಚುನಾವಣೆ ಸೋಲಿನ ಬಳಿಕ ಪಕ್ಷದ ಕೆಲವು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ದಲಿತ ಮತ್ತು ಹಿಂದುಳಿದ ವರ್ಗ ವಿರೋಧಿ ಧೋರಣೆಯೇ ಸೋಲಿಗೆ ಕಾರಣ ಎಂದು ಹಿಂದುಳಿದ ವರ್ಗಗಳ ಪ್ರಮುಖ ನಾಯಕ
ಮತ್ತು ಬಿಜೆಪಿಯ ಮಾಜಿ ಸಂಸದ ರಮಾಕಾಂತ್‌ ಯಾದವ್‌ ಅವರು ಟೀಕಿಸಿದ್ದಾರೆ.

ಗೋರಖಪುರ ಕ್ಷೇತ್ರವನ್ನು ಗೋರಖನಾಥ ಮಠದ ಜತೆಗೆ ಸಂಪರ್ಕ ಇಲ್ಲದವರು ಗೆಲ್ಲುವುದು ಗೋರಖನಾಥ ಮಠಕ್ಕೆ ಸೇರಿದವರಿಗೆ ಇಷ್ಟ ಇರಲಿಲ್ಲ. ಹಾಗಾಗಿಯೇ ಬಿಜೆಪಿ ಸೋಲಬೇಕಾಯಿತು ಎಂದು ಬಿಜೆಪಿಯ ಮುಖಂಡರೊಬ್ಬರು ಹೇಳಿದ್ದಾರೆ. ಆದಿತ್ಯನಾಥ ಅವರು ಗೋರಖಪುರ ಮಠದ ಮುಖ್ಯಸ್ಥ.

ಆದಿತ್ಯನಾಥ ಅವರು 15 ವರ್ಷಗಳ ಹಿಂದೆ ಸ್ಥಾಪಿಸಿದ ಹಿಂದೂ ಯುವ ವಾಹಿನಿಯ ಕಾರ್ಯಕರ್ತರು ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಲಿಲ್ಲ. ಬಿಜೆಪಿ ಬೆಂಬಲಿಗರು ಮತಗಟ್ಟೆಗೆ ಬರುವಂತೆಯೂ ಅವರು ನೋಡಿಕೊಳ್ಳಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಗೋರಖಪುರ ಮತ್ತು ಸುತ್ತಲಿನ ಜಿಲ್ಲೆಗಳಲ್ಲಿ ಹಿಂದೂ ಯುವ ವಾಹಿನಿ ಪ್ರಬಲವಾಗಿದೆ.
***
‘ಮುಸ್ಲಿಂ ಪ್ರಾಬಲ್ಯದ ಕ್ಷೇತ್ರ ಭಯೋತ್ಪಾದಕರ ತಾಣ’
ಪಟ್ನಾ:
ಅರಾಡಿಯಾ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಆರ್‌ಜೆಡಿ ಗೆಲುವಿನಿಂದಾಗಿ ಮುಸ್ಲಿಂ ಪ್ರಾಬಲ್ಯದ ಈ ಕ್ಷೇತ್ರ ‘ಭಯೋತ್ಪಾದಕರ ತಾಣ’ ಆಗಲಿದೆ ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಹೇಳಿದ್ದಾರೆ.

ಅರಾಡಿಯಾದ ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣ ಶೇ 40ರಷ್ಟು. ಈ ಕ್ಷೇತ್ರವು ಚುನಾವಣೆಯಲ್ಲಿ ‘ಮೂಲಭೂತವಾದಿ ಸಿದ್ಧಾಂತ’ವನ್ನು ಅಪ್ಪಿಕೊಂಡಿದೆ. ಮುಂದೆ ಈ ಪ್ರದೇಶ ಉಗ್ರವಾದದ ಕೇಂದ್ರವಾಗಲಿದೆ ಎಂದು ಗಿರಿರಾಜ್‌ ಹೇಳಿದ್ದಾರೆ. 

‘ಅರಾಡಿಯಾದ ಜನರು ಆರ್‌ಜೆಡಿಗೆ ಮತ ಹಾಕಿದರೆ ಈ ಪ್ರದೇಶವು ಪಾಕಿಸ್ತಾನದ ಗೂಢಚರ ಸಂಸ್ಥೆ ಐಎಸ್‌ಐನ ಕೇಂದ್ರವಾಗಿ ಬದಲಾಗಲಿದೆ’ ಎಂದು ಬಿಹಾರ ಬಿಜೆಪಿ ಘಟಕದ ಅಧ್ಯಕ್ಷ ನಿತ್ಯಾನಂದ ರಾಯ್‌ ಕಳೆದ ವಾರ ಹೇಳಿದ್ದರು. ಚುನಾವಣಾ ಆಯೋಗವು ರಾಯ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿತ್ತು.
***
ಮೈತ್ರಿಕೂಟ ರಚನೆ: ರಾಹುಲ್‌–ಪವಾರ್‌ ಭೇಟಿ
ನವದೆಹಲಿ :
ಲೋಕಸಭೆಗೆ 2019ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಮೈತ್ರಿಕೂಟ ರಚನೆ ಪ್ರಯತ್ನವನ್ನು ಕಾಂಗ್ರೆಸ್‌ ತೀವ್ರಗೊಳಿಸಿದೆ. ಅದರ ಭಾಗವಾಗಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಅವರನ್ನು ಗುರುವಾರ ಭೇಟಿಯಾಗಿದ್ದಾರೆ.

ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋತ ಬೆನ್ನಿಗೇ ಈ ಭೇಟಿ ನಡೆದಿದೆ.

ಗೋರಖಪುರ ಮತ್ತು ಫೂಲ್ಪುರ ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ರಾಹುಲ್‌ ಮತ್ತು ಪವಾರ್‌ ಭೇಟಿಯಾದರು. ಬಿಜೆಪಿ ವಿರುದ್ಧ ವಿರೋಧ ಪಕ್ಷಗಳ ಒಗ್ಗಟ್ಟಿನ ಬಗ್ಗೆ ಈ ಇಬ್ಬರು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು 20 ಪಕ್ಷಗಳ ಮುಖಂಡರಿಗೆ ಮಂಗಳವಾರ ಭೋಜನ ಕೂಟ ಏರ್ಪಡಿಸಿದ್ದರು.

ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನೂ ರಾಹುಲ್‌ ಭೇಟಿಯಾಗುವ ಸಾಧ್ಯತೆ ಇದೆ. ಇದೇ 28ರಂದು ಶರದ್‌ ಪವಾರ್‌ ಆಯೋಜಿಸಿರುವ ವಿರೋಧ ಪಕ್ಷಗಳ ಸಭೆಯಲ್ಲಿಯೂ ಮಮತಾ ಭಾಗವಹಿಸುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.