ಮುಂಬೈ/ ನವದೆಹಲಿ: ತೆರಿಗೆ ವಂಚನೆ ಆರೋಪದ ಮೇಲೆ ಬಂಧಿತನಾಗಿರುವ ಪುಣೆಯ ಉದ್ಯಮಿ ಹಸನ್ ಅಲಿ ಖಾನ್ ದೇಶದಿಂದ ದೋಚಿದ ದುಡ್ಡು 36 ಸಾವಿರ ಕೋಟಿ (8 ಶತಕೋಟಿ ಡಾಲರ್) ಎಂದು ಅಂದಾಜಿಸಲಾಗಿದ್ದು, ಅವನ ವಿರುದ್ಧ ಭಯೋತ್ಪಾದನೆ ನಿಗ್ರಹ ಕಾನೂನಿನಂತಹ ಕಠಿಣ ಕಾನೂನಿನ ಅಡಿಯಲ್ಲಿ ಆರೋಪ ಹೊರಿಸಲು ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.
ಅಲಿ, ಭಾರತದ ಅತಿ ದೊಡ್ಡ ತೆರಿಗೆ ವಂಚಕ ಎಂದು ಭಾವಿಸಲಾಗಿದ್ದು, ತೆರಿಗೆ ರೂಪದಲ್ಲಿ ಆತ 40 ಸಾವಿರ ಕೋಟಿ ರೂಪಾಯಿ ಪಾವತಿಸಬೇಕಿದೆ.
ಮತ್ತೊಂದೆಡೆ ಸ್ವಿಟ್ಜರ್ಲೆಂಡ್ ಸಹ ಅಲಿ ವಿಚಾರದಲ್ಲಿ ಭಾರತದ ಕೋರಿಕೆಗೆ ಮಾನ್ಯತೆ ನೀಡುವ ಸೂಚನೆ ನೀಡಿದ್ದು, ‘ಸಂಪೂರ್ಣ’ ಕೋರಿಕೆ ಸಲ್ಲಿಸಿದರೆ ಅಲಿಯ ಖಾತೆಗಳ ಬಗ್ಗೆ ಮಾಹಿತಿ ವಿನಿಮಯ ಇಂಗಿತ ವ್ಯಕ್ತಪಡಿಸಿದೆ.
ಅಲಿಯನ್ನು ಮಂಗಳವಾರ ಮುಂಬೈಯ ಮುಖ್ಯ ಸೆಷನ್ಸ್ ನ್ಯಾಯಾಧೀಶ ಎಂ. ಎಲ್. ತೆಹಲಿಯಾನಿ ಅವರ ಮುಂದೆ ಹಾಜರುಪಡಿಸಿದಾಗ ಅವರು ಈ ಪ್ರಕರಣ ಯಾರ ವ್ಯಾಪ್ತಿಗೆ ಬರುತ್ತದೆ ಎಂಬ ಪ್ರಶ್ನೆಯನ್ನು ಎತ್ತಿ ಒಂದು ದಿನದ ಮಟ್ಟಿಗೆ ಆತನನ್ನು ಜಾರಿ ನಿರ್ದೇಶನಾಲಯದ (ಇ.ಡಿ.) ವಶಕ್ಕೆ ಒಪ್ಪಿಸಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದರು. ಹೀಗಾಗಿ ಅಲಿ ಇನ್ನೂ ಒಂದು ದಿನ ಇ.ಡಿ. ಕಸ್ಟಡಿಯಲ್ಲೇ ಉಳಿಯಬೇಕಾಗಿದೆ.
ಅಲಿಯನ್ನು ತಮ್ಮ ಬದಲಿಗೆ ಮ್ಯಾಜಿಸ್ಟ್ರೇಟ್ ಒಬ್ಬರ ಮುಂದೆ ಹಾಜರುಪಡಿಸಬೇಕಿತ್ತು ಎಂದು ನ್ಯಾಯಾಧೀಶ ತೆಹಲಿಯಾನಿ ಹೇಳಿದರು. ಆದರೆ ಹಣ ಲೇವಾದೇವಿ ಕಾಯ್ದೆಯಂತೆ ವಿಶೇಷ ನ್ಯಾಯಾಲಯಕ್ಕೆ ವಿಚಾರಣೆ ನಡೆಸುವ ಅಧಿಕಾರ ಇದೆ ಎಂದು ಸರ್ಕಾರಿ ವಕೀಲ ಎನ್. ಪುಂಡೆ ವಾದಿಸಿದರು. ಪ್ರತಿವಾದಿ ಪರ ವಕೀಲರೂ ಇದಕ್ಕೆ ಸಮ್ಮತಿ ಸೂಚಿಸಿದರು. ಹೀಗಾಗಿ ನ್ಯಾಯಾಧೀಶರು ವಿಚಾರಣೆಯ ಪರಿಧಿಯನ್ನು ಬುಧವಾರ ಪರಿಶೀಲಿಸುವುದಾಗಿ ಹೇಳಿದರು.
ಸುದೀರ್ಘ ವಿಚಾರಣೆಯಿಂದ ತೀರಾ ಬಳಲಿದಂತೆ ಕಾಣಿಸುತ್ತಿದ್ದ ಅಲಿಯನ್ನು ಮಂಗಳವಾರ ಬೆಳಿಗ್ಗೆ ಜೆ.ಜೆ.ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿತ್ತು.
ಸುಪ್ರೀಂ ಕೋರ್ಟ್ ಸಲಹೆ: : ಹಸನ್ ಅಲಿ ಖಾನ್ ವಿರುದ್ಧ ಭಯೋತ್ಪಾದನೆ ನಿಗ್ರಹ ಮತ್ತು ಇತರ ಕಠಿಣ ಕಾನೂನುಗಳ ಅಡಿಯಲ್ಲಿ ಆರೋಪಗಳನ್ನು ಹೊರಿಸುವ ನಿಟ್ಟಿನಲ್ಲಿ ಪರಿಶೀಲನೆ ನಡೆಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ತನಿಖಾ ಸಂಸ್ಥೆಗಳಿಗೆ ಸಲಹೆ ನೀಡಿದೆ. ನ್ಯಾಯಮೂರ್ತಿಗಳಾದ ಬಿ.ಸುದರ್ಶನ್ ರೆಡ್ಡಿ ಮತ್ತು ಎಸ್.ಎಸ್.ನಿಜ್ಜರ್ ಅವರನ್ನು ಒಳಗೊಂಡ ಪೀಠ ಈ ಸೂಚನೆ ನೀಡಿ, ಅಲಿ ಮೇಲಿನ ನಕಲಿ ಪಾಸ್‌ಪೋರ್ಟ್ ಹೊಂದಿದ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸುವುದು ಸಾಧ್ಯವೇ ಎಂದು ಪರಿಶೀಲಿಸುವಂತೆ ಕೇಂದ್ರವನ್ನು ಕೇಳಿಕೊಂಡಿತು.
ಅಲಿ ವಿರುದ್ಧದ ನಕಲಿ ಪಾಸ್‌ಪೋರ್ಟ್ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯದೆ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಇದೊಂದು ಗಂಭೀರ ವಿಚಾರವಾದರೂ ಸರಿಯಾದ ವೇಗದಲ್ಲಿ ತನಿಖೆ ನಡೆಯುತ್ತಿಲ್ಲ ಎಂದು ಹೇಳಿತು. ವಿದೇಶಿ ಬ್ಯಾಂಕ್‌ಗಳಲ್ಲಿ ಭಾರತೀಯರು ತೆರಿಗೆ ವಂಚಿಸಿ ಇಟ್ಟಿರುವ ಭಾರಿ ಪ್ರಮಾಣದ ಕಪ್ಪುಹಣವನ್ನು ವಾಪಸ್ ತರಬೇಕು ಎಂದು ಕೋರಿ ಹಿರಿಯ ವಕೀಲ ರಾಂ ಜೇಠ್ಮಲಾನಿ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಕೋರಿಕೆಗೆ ಕಾಯುತ್ತಿದೆ ಸ್ವಿಸ್:ಕಪ್ಪು ಹಣದ ಆರೋಪದ ಮೇರೆಗೆ ಬಂಧಿತರಾಗಿರುವ ಪುಣೆಯ ಉದ್ಯಮಿ ಹಸನ್ ಅಲಿ ವಿರುದ್ಧ ತನಿಖೆ ನಡೆಸುವ ವಿಚಾರದಲ್ಲಿ ಭಾರತದಿಂದ ‘ಸಂಪೂರ್ಣ’ ಕೋರಿಕೆ ಬರುವುದನ್ನು ತಾನು ಎದುರು ನೋಡುತ್ತಿರುವುದಾಗಿ ಸ್ವಿಟ್ಜರ್ಲೆಂಡ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.