ADVERTISEMENT

ಹಿಂಸಾಚಾರ ತಡೆಗೆ ಅಭಿವೃದ್ಧಿಯೊಂದೇ ಉತ್ತರ: ಮೋದಿ

ಪಿಟಿಐ
Published 15 ಜೂನ್ 2018, 7:16 IST
Last Updated 15 ಜೂನ್ 2018, 7:16 IST
ಹಿಂಸಾಚಾರ ತಡೆಗೆ ಅಭಿವೃದ್ಧಿಯೊಂದೇ ಉತ್ತರ: ಮೋದಿ
ಹಿಂಸಾಚಾರ ತಡೆಗೆ ಅಭಿವೃದ್ಧಿಯೊಂದೇ ಉತ್ತರ: ಮೋದಿ   

ಭಿಲಾಯಿ(ಛತ್ತೀಸಗಡ): ಹಿಂಸಾಚಾರ ತಡೆಗೆ ಉತ್ತರ ನೀಡುವುದಾದರೆ ಅದು ಅಭಿವೃದ್ಧಿಯೊಂದೇ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಈ ಮೂಲಕ ಪ್ರಧಾನಿ, ಛತ್ತೀಸಗಡದಲ್ಲಿ ವಿದ್ವಂಸಕ ಕೃತ್ಯಗಳೊಂದಿಗೆ ಹಿಂಸಾಚಾರಕ್ಕೆ ತೊಡಗುವ ನಕ್ಸಲರಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದರು.

ಛತ್ತೀಸಘಡದಲ್ಲಿ ಪ್ರಸಕ್ತ ವರ್ಷ ನಡೆದ ಚುನಾವಣೆ ಬಳಿಕ ಕೈಗೊಳಲಾಗುತ್ತಿರುವ ₹22 ಸಾವಿರ ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಗುರುವಾರ ಚಾಲನೆ ನೀಡಿದ ಬಳಿಕ ನಡೆದ ಸಮಾರಂಭದಲ್ಲಿ ಅವರು ಮಾತನಾಡಿರು. ತಮ್ಮ ಸರ್ಕಾರ ‘ವಿಶ್ವಾಸದ ವಾತಾವರಣ’ವನ್ನು ಸೃಷ್ಟಿಸುತ್ತಿದೆ ಎಂದರು.

ADVERTISEMENT

ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಅಭಿವೃದ್ಧಿಕಾರ್ಯಗಳ ಪಟ್ಟಿ ಮಾಡಿದ ಮೋದಿ, ‘ಯಾವುದೇ ರೀತಿಯ ಹಿಂಸಾಚಾರ ಮತ್ತು ಪಿತೂರಿಗಳ ತಡೆಗೆ ಅಭಿವೃದ್ಧಿಯೊಂದೇ ಉತ್ತರವಾಗಬಲ್ಲದು ಎಂದು ನಾನು ಭಾವಿಸಿದ್ದೇನೆ. ಈರೀತಿ ಹೊರಹೊಮ್ಮುವ ನಂಬಿಕೆಯು ಯಾವುದೇ ಬಗೆಯ ಹಿಂಸಾಚಾರವನ್ನು ಕೊನೆಗೊಳಿಸುತ್ತದೆ’ ಎಂದು ವಿಶ್ವಾಸ ವ್ಯಕ್ತ‍ಪಡಿಸಿದರು.

ಛತ್ತೀಸಗಡ ನಕ್ಸಲ್‌ ದಂಗೆಕೋರರಿಂದಾಗಿ ಅತಿದೊಡ್ಡ ಹಿಂಸೆಗೆ ಸಾಕ್ಷಿಯಾಗುತ್ತಿದೆ ಎಂಬ ಅಭಿಪ್ರಾಯಗಳು ಹೆಚ್ಚು ಮಹತ್ವ ಪಡೆಯುತ್ತಿರುವ ಈ ಸಂದರ್ಭದಲ್ಲಿ ‘ವಿಶ್ವಾಸದ ವಾತಾವರಣ’ ಸೃಷ್ಟಿಸುವ ಕುರಿತು ಮಾತನಾಡಿದ ಮೋದಿ, ಖನಿಜಗಳಂತಹ ನೈಸರ್ಗಿಕ ಸಂಪನ್ಮೂಗಳಿಂದ ಗಳಿಸುವ ಹೆಚ್ಚಿನ ಭಾಗವನ್ನು ಸ್ಥಳೀಯರ ಕಲ್ಯಾಣಕಾರ್ಯಗಳಿಗೆ ಸರ್ಕಾರ ವೆಚ್ಚ ಮಾಡಲಿದೆ ಎಂದು ಭರವಸೆ ನೀಡಿದರು.

ಆಸ್ಪತ್ರೆ, ಶಾಲೆ, ರಸ್ತೆ, ಶೌಚಾಲಯಗಳ ಸೌಲಭ್ಯಕ್ಕಾಗಿ ಛತ್ತೀಸಗಡ ಹೆಚ್ಚುವರಿಯಾಗಿ ₹3 ಸಾವಿರ ಕೋಟಿಯನ್ನು ಅನುದಾನ ಪಡೆದಿದೆ ಎಂದು ಹೇಳಿದ ಅವರು, ಹಿಂದುಳಿದವರು ಮತ್ತು ಬುಡಕಟ್ಟು ಸಮುದಾಯದವರ ಜೀವನಮಟ್ಟ ಸುಧಾರಣೆ ಮತ್ತು ಆದಾಯ ವೃದ್ಧಿಗೆ ಕೇಂದ್ರ ಸರ್ಕಾರ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದೆ ಎಂದರು.

ಇಂದು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಇದರಲ್ಲಿ ಜಗದಲ್ಪುರ–ರಾಯಪುರ ನಡುವಿನ ವಿಮಾನ ಸಂಚಾರ ಸೇವೆಯೂ ಒಂದು ಎಂದರು. ‘ಹವಾಯಿ ಚಪ್ಪಲಿ’ ಹಾಕುವವರೂ ವಿಮಾನದಲ್ಲಿ ಪ್ರಯಾಣಿಸುವಂತಾಗಬೇಕು ಎಂದು ಮೋದಿ ಈ ಹಿಂದೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.