ADVERTISEMENT

ಹಿಂಸೆಗಿಳಿಯಬೇಡಿ; ಮಾತುಕತೆ ನಡೆಸಿ: ರಾಜನಾಥ್

ಪಿಟಿಐ
Published 18 ಜೂನ್ 2017, 12:21 IST
Last Updated 18 ಜೂನ್ 2017, 12:21 IST
ಹಿಂಸೆಗಿಳಿಯಬೇಡಿ; ಮಾತುಕತೆ ನಡೆಸಿ: ರಾಜನಾಥ್
ಹಿಂಸೆಗಿಳಿಯಬೇಡಿ; ಮಾತುಕತೆ ನಡೆಸಿ: ರಾಜನಾಥ್   

ನವದೆಹಲಿ: ‘ಹಿಂಸೆಗೆ ಇಳಿಯಬೇಡಿ’ ಎಂದು ಡಾರ್ಜಿಲಿಂಗ್‌ನಲ್ಲಿ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಿಸಿರುವ ಪ್ರತಿಭಟನಾಕಾರರಿಗೆ ಮನವಿ ಮಾಡಿರುವ ಗೃಹ ಸಚಿವ ರಾಜನಾಥ ಸಿಂಗ್‌ ಅವರು, ಯಾವುದೇ ಸಮಸ್ಯೆ ಬಗೆಹರಿಸಿಕೊಳ್ಳಲು ಮಾತುಕತೆ ನಡೆಸಿ ಎಂದು ಕರೆ ನೀಡಿದ್ದಾರೆ.

ಡಾರ್ಜಿಲಿಂಗ್‌ನ ಸಿಂಗಮಾರಿ ಪ್ರದೇಶವು ಶನಿವಾರ ರಣರಂಗವಾಗಿ ಮಾರ್ಪಟ್ಟಿತ್ತು. ಗೂರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ಕಾರ್ಯಕರ್ತ ಮತ್ತು ಪೊಲೀಸರ ಮಧ್ಯೆ ನಡೆದ ಘರ್ಷಣೆಯಲ್ಲಿ ಒಬ್ಬ ಮೃತಪಟ್ಟು, 35 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.

ಉದ್ರಿಕ್ರ ಪ್ರತಿಭಟನಾಕಾರರು ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದರು. ಕಲ್ಲು ಹಾಗೂ ಬಾಟಲ್‌ಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು. ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿ, ಲಾಠಿ ಪ್ರಹಾರ ಮಾಡಿದ್ದರು. ಇದರಿಂದಾಗಿ ಇಲ್ಲಿನ ಪ್ರದೇಶ ಪ್ರಕ್ಷುಬ್ಧವಾಗಿದೆ.

ADVERTISEMENT

ಈ ಸಂಬಂಧ ಜಿಜೆಎಂ ಕಾರ್ಯಕರ್ತರಿಗೆ ಶಾಂತಿ ಕಾಪಾಡುವಂತೆ ರಾಜನಾಥ್ ಸಿಂಗ್ ಅವರು ಮನವಿ ಮಾಡಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂಸಾಚಾರದಿಂದ ಎಂದಿಗೂ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಅಲ್ಲಿನ ನಿವಾಸಿಗಳು ಶಾಂತಿ ಕಾಪಾಡಬೇಕು. ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

‌ಸಂಬಂಧಪಟ್ಟ ಎಲ್ಲಾ ಪಕ್ಷಗಳು ಮತ್ತು ಮುಖಂಡರು ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ಪರಸ್ಪರ ಮಾತುಕತೆಯೊಂದಿಗೆ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಬೇಕು ಎಂದಿದ್ದಾರೆ.

ಡಾರ್ಜಿಲಿಂಗ್ ಮತ್ತು ಸಮೀಪದ ಪ್ರದೇಶಗಳಲ್ಲಿ ವಾಸಿಸುವ ಜನರು ಶಾಂತಿಯಿಂದಿರಬೇಕು. ಹಿಂಸೆಗೆ ಇಳಿಯಬೇಡಿ ಎಂದು ಮನವಿ ಮಾಡಿ ಟ್ವೀಟ್‌ಗಳನ್ನು ಮಾಡಿದ್ದಾರೆ.

ಘಟನೆ ಸಂಬಂಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಇಂದು ಮಾತನಾಡಿರುವ ರಾಜನಾಥ ಸಿಂಗ್ ಅವರು ಅಲ್ಲಿ ಪರಿಸ್ಥಿತಿಯ ಮಾಹಿತಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.