ADVERTISEMENT

ಹಿಮಜಾರಾಟಕ್ಕಾಗಿ ಎವರೆಸ್ಟ್ ಏರಿದ ಐಟಿಬಿಪಿ ತಂಡ

​ಪ್ರಜಾವಾಣಿ ವಾರ್ತೆ
Published 19 ಮೇ 2012, 8:00 IST
Last Updated 19 ಮೇ 2012, 8:00 IST

ನವದೆಹಲಿ (ಪಿಟಿಐ): ಅರೆ ಸೇನಾಪಡೆ ಭಾರತ ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ನ ಆರು ಸದಸ್ಯರ ತಂಡವೊಂದು ಹಿಮಜಾರಾಟ (ಸ್ಕೀ ಡೌನ್) ಸಾಹಸ ದಾಖಲೆ ನಿರ್ಮಾಣದ ಅಂಗವಾಗಿ ಶನಿವಾರ ವಿಶ್ವದ ಅತ್ಯುನ್ನತ ಪರ್ವತ ಶಿಖರ ಎವರೆಸ್ಟ್ ನ್ನು ಏರಿತು. ತಂಡವು ಚೀನಾದ ಕಡೆಯಿಂದ ಹಿಮಜಾರಾಟ ಮಾಡುವುದು.

ರಾಜಧಾನಿ ದೆಹಲಿಯಯಲ್ಲಿ ಏಪ್ರಿಲ್ 6 ರಂದು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತೇಜಿಂದರ್ ಖನ್ನಾ ಅವರು ಈ ತಂಡದ ಸಾಹಸಕ್ಕೆ ಹಸಿರು ನಿಶಾನೆ ತೋರಿದ್ದರು. ಶನಿವಾರ ಬೆಳಗ್ಗೆ 8.30ಕ್ಕೆ ತಂಡವು ಎವರೆಸ್ಟ್ ಶಿಖರಾರೋಹಣ ಮಾಡಿ, ತ್ರಿವರ್ಣ ಧ್ವಜವನ್ನು ಅರಳಿಸಿತು.

~ಆರು ಸದಸ್ಯರ ತಂಡವು ಇಲ್ಲಿಂದ ಚೀನಾ ಭಾಗದಲ್ಲಿ ಹಿಮಜಾರಾಟ ಮಾಡುತ್ತಾ ಶಿಖರದಿಂದ ಕೆಳಗಿಳಿಯಲಿದೆ. ತನ್ನ ಸ್ವರ್ಣ ಮಹೋತ್ಸವ ಅಚರಣೆ ಅಂಗವಾಗಿ ಈ ಪ್ರಯತ್ನ ನಡೆಸುತ್ತಿದೆ ಎಂದು ಭಾರತ ಟಿಬೆಟ್ ಗಡಿ ಪೊಲೀಸ್ ಪಡೆಯ ವಕ್ತಾರ ದೀಪಕ್ ಪಾಂಡೆ ಹೇಳಿದರು.

ಐಟಿಬಿಪಿ ಮುಖ್ಯಸ್ಥ ರಣಜಿತ್ ಸಿನ್ಹ ಅವರು ಶಿಖರವೇರಿದ ಯಶಸ್ವೀ ತಂಡದ ಸದಸ್ಯರ ಜೊತೆಗೆ ಶಿಖರವೇರಿದ ಸ್ವಲ್ಪ ಹೊತ್ತಿನಲ್ಲೇ ಉಪಗ್ರಹ ಫೋನ್ ಮೂಲಕ ಮಾತನಾಡಿದರು.

ರತನ್ ಸಿಂಗ್ ಸೋನಾಲ್ ನೇತೃತ್ವದ ಈ ತಂಡದಲ್ಲಿ ಪ್ರದೀಪ್ ಕುಮಾರ್ ನೇಗಿ, ಪಸಿಂಗ್ ಶೆರ್ಪಾ, ದೇವೆಂದ್ರ ಸಿಂಗ್, ಬೀರೇಂದ್ರ ಸಿಂಗ್ ಮತ್ತು ಕಿಶೋರ್ ಪ್ರಸಾದ್ ಗುರ್ಗಾಂಗ್ ಅವರು ಇದ್ದಾರೆ.

ಈ ಮಧ್ಯೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಖನ್ನಾ ಅವರೂ ಐಟಿಬಿಪಿ ಮಹಾನಿರ್ದೇಶಕ ಸಿನ್ಹ ಅವರಿಗೆ ತನ್ನ ಅಭಿನಂದನೆಗಳನ್ನು ಸಲ್ಲಿಸಿದರು.

23 ಮಂದಿಯ ಐಟಿಬಿಪಿ ತಂಡಕ್ಕೆ  ಪರ್ವತಾರೋಹಣ ಮತ್ತು ನೇಪಾಳದ ಮಾಮೂಲಿ ಮಾರ್ಗದ ಬದಲು ಚೀನಾದ ಕಡೆಯ ಕಠಿಣ ಮಾರ್ಗದಲ್ಲಿ ಹಿಮಜಾರಾಟ ಮೂಲಕ ಕೆಳಗಿಳಿಯುವ ಎವರೆಸ್ಟ್ ಸಾಹಸ ಯಾತ್ರೆ ಹಸಿರು ನಿಶಾನೆ ತೋರಲಾಗಿತ್ತು.

8,848 ಮೀಟರ್ ಎತ್ತರದ ಶಿಖರದಿಂದ ತಿಂಗಳಲ್ಲಿ ಯಾವುದೋ ಒಂದು ದಿನ ಹಿಮಜಾರಾಟ ಮೂಲಕ ಕೆಳಗಿಳಿದಾಗ ~ಇಂತಹ ಸಾಹಸ ಮಾಡಿದ ಮೊತ್ತ ಮೊದಲ ಭಾರತೀಯ ಪರ್ವತಾರೋಹಿ ಸಾಹಸ ತಂಡ~ ಎಂಬ ಹೆಗ್ಗಳಿಕೆಗೆ ಅದು ಪಾತ್ರವಾಗಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.