ADVERTISEMENT

ಹಿಮಾಚಲ: ವೀರಭದ್ರ ಸಿಂಗ್ ಪ್ರಮಾಣ

ಆರನೇ ಬಾರಿಗೆ ಮುಖ್ಯಮಂತ್ರಿ ಗದ್ದುಗೆ ಅಲಂಕರಿಸಿದ ದಾಖಲೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 19:59 IST
Last Updated 25 ಡಿಸೆಂಬರ್ 2012, 19:59 IST
ಆರನೇ ಬಾರಿಗೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ವೀರಭದ್ರ ಸಿಂಗ್ ಅವರು ಮಂಗಳವಾರ ಶಿಮ್ಲಾದಲ್ಲಿ ಪ್ರಮಾಣವಚನ ಸ್ವೀಕರಿಸಿದರು 	-ಪಿಟಿಐ ಚಿತ್ರ.
ಆರನೇ ಬಾರಿಗೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ವೀರಭದ್ರ ಸಿಂಗ್ ಅವರು ಮಂಗಳವಾರ ಶಿಮ್ಲಾದಲ್ಲಿ ಪ್ರಮಾಣವಚನ ಸ್ವೀಕರಿಸಿದರು -ಪಿಟಿಐ ಚಿತ್ರ.   

ಶಿಮ್ಲಾ (ಪಿಟಿಐ):  ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ವೀರಭದ್ರ ಸಿಂಗ್ ಆರನೇ ಬಾರಿಗೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಮಂಗಳವಾರ ಇಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ಇವರೊಂದಿಗೆ ಒಂಬತ್ತು ಮಂದಿ ಸಚಿವರು ಕೂಡ ಪ್ರಮಾಣ ಸ್ವೀಕರಿಸಿದರು.

ಇಲ್ಲಿನ ಐತಿಹಾಸಿಕ ರಿಡ್ಜ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರಾದ ಊರ್ಮಿಳಾ ಸಿಂಗ್ ಅವರು 78 ವರ್ಷದ ವೀರಭದ್ರ ಸಿಂಗ್ ಅವರಿಗೆ ಪ್ರಮಾಣ ಭೋದಿಸಿದರು. ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು  ಪಾಲ್ಗೊಂಡಿದ್ದರು.

ಕಾಂಗ್ರೆಸ್ ಹಿರಿಯ ಮುಖಂಡರಾದ ವಿದ್ಯಾ ಸ್ಟೋಕ್ಸ್ ಮತ್ತು ಕೌಲ್ ಸಿಂಗ್ ಠಾಕೂರ್, ಸಿ.ಎಸ್. ಬಾಲಿ, ಸುಜನ್ ಸಿಂಗ್ ಪಠಾನಿಯಾ, ಠಾಕೂರ್ ಸಿಂಗ್ ಭರ್‌ಮೌರಿ, ಮುಕೇಶ್ ಅಗ್ನಿಹೋತ್ರಿ, ಸುಧೀರ್ ಶರ್ಮಾ, ಪ್ರಕಾಶ ಚೌಧರಿ ಮತ್ತು ಧಾನಿ ರಾಮ್ ಶಾಂಡಿಲ್ ಪ್ರಮಾಣ ಸ್ವೀಕರಿಸಿದವರಲ್ಲಿ ಸೇರಿದ್ದಾರೆ.
ಒಟ್ಟು 15 ಸ್ಥಾನಗಳ ಪೈಕಿ 10ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ಕಾಂಗ್ರಾ ಪ್ರದೇಶದಿಂದ ಮೂವರು, ಶಿಮ್ಲಾ ಮತ್ತು ಮಂಡಿ ಜಿಲ್ಲೆಯಿಂದ ತಲಾ ಇಬ್ಬರು, ಚಂಬಾ, ಉನಾ ಮತ್ತು ಸೋಲನ್ ಜಿಲ್ಲೆಯಿಂದ ತಲಾ ಒಬ್ಬರಿಗೆ ನೂತನ ಸಂಪುಟದಲ್ಲಿ ಪ್ರಾತಿನಿಧ್ಯ ಕಲ್ಪಿಸಲಾಗಿದೆ.

ಮೂಲಗಳ ಪ್ರಕಾರ, ವೀರಭದ್ರ ಸಿಂಗ್ ಅವರನ್ನು ಶಿಮ್ಲಾದಲ್ಲಿ ಶನಿವಾರ ನಡೆದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಆನಂತರ ಸಿಂಗ್ ಸೋಮವಾರ ನವದೆಹಲಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿ ನೂತನ ಸಂಪುಟ ರಚಿಸುವ ಬಗ್ಗೆ ಚರ್ಚೆ ನಡೆಸಿದ್ದರು.
ಒಟ್ಟು 68 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ 36 ಶಾಸಕರಿದ್ದಾರೆ. ಏಕೈಕ ಪಕ್ಷೇತರ ಶಾಸಕ ಯಾವುದೇ ಷರತ್ತಿಲ್ಲದೇ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ.

ವೀರಭದ್ರ ಸಿಂಗ್ 1983ರಿಂದ 1985, 1985ರಿಂದ 1990, 1993ರಿಂದ 1998, 2003ರಿಂದ 2007ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಏಳು ಬಾರಿ ಶಾಸಕರಾಗಿ, ಐದು ಸಲ ಸಂಸದರಾಗಿ ಆಯ್ಕೆಯಾಗಿದ್ದಾರೆ. ಸದ್ಯ ಮಂಡಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ನಾಲ್ಕು ಸಲ ಹಿಮಾಚಲ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದಾರೆ. ಈ ಮೂಲಕ ಅವರು ಸುಮಾರು ಐದು ದಶಕಗಳ ಕಾಲ (50ಕ್ಕೂ ಹೆಚ್ಚು ವರ್ಷ) ರಾಜಕಾರಣದಲ್ಲಿ ಸೇವೆ ಸಲ್ಲಿಸಿದ್ದಾರೆ.

ಆರೋಪಮುಕ್ತ: ಭ್ರಷ್ಟಾಚಾರ ಮತ್ತು ವಂಚನೆ ಆರೋಪ ಎದುರಿಸುತ್ತಿದ್ದ ವೀರಭದ್ರ ಸಿಂಗ್ ಅವರನ್ನು ಶಿಮ್ಲಾದ ಸ್ಥಳೀಯ ನ್ಯಾಯಾಲಯ ಸೋಮವಾರ ಪ್ರಕರಣದಿಂದ ಆರೋಪಮುಕ್ತ ಮಾಡಿದೆ. ಪ್ರಮಾಣ ಸ್ವೀಕರಿಸುವ ಮುನ್ನಾದಿನವೇ ಕೋರ್ಟ್ ನೀಡಿರುವ ಈ ತೀರ್ಪಿನಿಂದ ಸಿಂಗ್ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ನೇಮಕ: ಮೂವರು ಕಾಂಗ್ರೆಸ್ ಶಾಸಕರಾದ ನೀರಜ್ ಭಾರ್ತಿ (ಜ್ವಾಲಿ ಕ್ಷೇತ್ರ), ರಾಜೇಶ್ ಧರ್ಮನಿ (ಘುಮರ್‌ವಿನ್) ಹಾಗೂ ವಿನಯ್ ಕುಮಾರ್ (ಶ್ರೀ ರೇಣುಕಾಜಿ) ಅವರು ಮುಖ್ಯ ಸಂಸದೀಯ ಕಾರ್ಯದರ್ಶಿಗಳಾಗಿ ಅಧಿಕಾರ ಸ್ವೀಕರಿಸಿದರು.

ಮರುನೇಮಕ ರದ್ದು: ಅಧಿಕಾರಕ್ಕೆ ಬರುತ್ತಿದ್ದಂತೆಯೇ ವೀರಭದ್ರ ಸಿಂಗ್ ಅವರು ಸರ್ಕಾರಿ ನೌಕರರ ಸೇವಾ ವಿಸ್ತರಣೆ ಹಾಗೂ ಮರುನೇಮಕವನ್ನು ರದ್ದು ಮಾಡಲು ನಿರ್ಧರಿಸಿದ್ದಾರೆ. ಅಲ್ಲದೇ ಹಿಂದಿನ ಬಿಜೆಪಿ ಸರ್ಕಾರ ತೆಗೆದುಕೊಂಡಿದ್ದ ಎಲ್ಲ ನಿರ್ಧಾರಗಳನ್ನು ಪುನರ್‌ಪರಿಶೀಲಿಸಲು ಮುಂದಾಗಿದ್ದಾರೆ.
 

ಬುಶಹರ್ ರಾಜ ವಂಶಸ್ಥ `ರಾಜಾ ಸಾಬ್'...
ಬುಶಹರ್ ರಾಜ ವಂಶಸ್ಥರಾದ ವೀರಭದ್ರ ಸಿಂಗ್, ಎಲ್ಲರಿಗೂ `ರಾಜಾ ಸಾಬ್' ಎನ್ನುವ ಹೆಸರಿನಿಂದಲೇ ಪರಿಚಿತರು. ಜನರು ಅವರನ್ನು `ರಾಜಾ ಸಾಬ್' ಎಂದೇ ಕರೆಯುತ್ತಾರೆ.

1934ರ ಜೂನ್ 23ರಂದು ರಾಜಮನೆತನ ಕುಟುಂಬದಲ್ಲಿ ಜನಿಸಿದ ಸಿಂಗ್, 1947ರಲ್ಲಿ ಕೇವಲ 13ನೇ ವಯಸ್ಸಿನಲ್ಲಿ ರಾಜ್ಯದ ಅರಸನಾಗಿ ಗದ್ದುಗೆ ಏರಿದ್ದರು. 1961ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ ಅವರು, 1962ರಲ್ಲಿ ಮಹಾಸು ಕ್ಷೇತ್ರದಿಂದ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದರು
.
`ಇಂದು ನಾನು ಹೆಚ್ಚು ಸಹಿಷ್ಣುವಾಗಿದ್ದೇನೆ. ಕೆಲಸದ ಬಗ್ಗೆ ನನಗಿದ್ದ ಬದ್ಧತೆ ಮತ್ತು ಉತ್ಸಾಹವು ಮೊದಲ ಬಾರಿ ಮುಖ್ಯಮಂತ್ರಿ ಆಗುವ ಸಂದರ್ಭದಲ್ಲಿ ಹೇಗಿತ್ತೋ, ಈಗಲೂ ಹಾಗೆಯೇ ಇದೆ' ಎಂದು ಸಿಂಗ್ ಹೇಳಿದ್ದಾರೆ.

ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ತಾವು ಪಡೆದ ಅನುಭವಗಳು ರಾಜ್ಯವನ್ನು ದಾರಿದ್ರ್ಯ ಮತ್ತು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ನೆರವಾಗಲಿದೆ ಎಂದೂ ಅವರು ತಿಳಿಸಿದ್ದಾರೆ.

`ಅಧಿಕಾರಶಾಹಿ ಎನ್ನುವುದು ಕುದುರೆಯ ಹಾಗೆ. ಸವಾರ ಅನುಭವಿಯಾದರೆ, ಕುದುರೆ ಕೂಡ ಆತ ಹೇಳಿದಂತೆ ಕೇಳುತ್ತದೆ. ಒಂದು ವೇಳೆ ಸವಾರ ಅನನುಭವಿಯಾಗಿದ್ದರೆ, ಕುದುರೆ ನಿಯಂತ್ರಣ ಕಳೆದುಕೊಂಡು ಓಡುತ್ತದೆ. ಸವಾರನನ್ನು ಬೀಳಿಸುತ್ತದೆ' ಎಂದು ಮುಖ್ಯಮಂತ್ರಿಯಾಗಿ 16 ವರ್ಷಗಳ ಅನುಭವವಿರುವ ಸಿಂಗ್ ಹೇಳಿದ್ದಾರೆ.

ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಅದಕ್ಷತೆಯನ್ನು ಹೋಗಲಾಡಿಸುವುದಕ್ಕೆ ಪ್ರಥಮ ಪ್ರಾಶಸ್ತ್ಯ ನೀಡುವುದಾಗಿಯೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.