ADVERTISEMENT

ಹುಸಿ ಬಾಂಬ್‌ ಬೆದರಿಕೆ: ವ್ಯಕ್ತಿ ಬಂಧನ

ಜೆಟ್‌ ಏರ್‌ವೇಸ್‌ ವಿಮಾನದ ಶೌಚಾಲಯದಲ್ಲಿ ಬೆದರಿಕೆ ಪತ್ರ ಪತ್ತೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 19:30 IST
Last Updated 30 ಅಕ್ಟೋಬರ್ 2017, 19:30 IST
ಹುಸಿ ಬಾಂಬ್‌ ಬೆದರಿಕೆ: ವ್ಯಕ್ತಿ ಬಂಧನ
ಹುಸಿ ಬಾಂಬ್‌ ಬೆದರಿಕೆ: ವ್ಯಕ್ತಿ ಬಂಧನ   

ಅಹಮದಾಬಾದ್‌/ನವದೆಹಲಿ: ಮುಂಬೈನಿಂದ ದೆಹಲಿಗೆ ಹೊರಟಿದ್ದ ಜೆಟ್‌ ಏರ್‌ವೇಸ್‌ ವಿಮಾನ ಅಹಮದಾಬಾದ್‌ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಪ್ರಯಾಣಿಕನನ್ನು ಬಂಧಿಸಲಾಗಿದೆ.

ವಿಮಾನದಲ್ಲಿ ಅಪಹರಣಕಾರರಿದ್ದಾರೆ ಮತ್ತು ಬಾಂಬ್‌ ಇರಿಸಲಾಗಿದೆ ಎಂದು ಉರ್ದು ಮತ್ತು ಇಂಗ್ಲಿಷ್‌ನಲ್ಲಿ ಬರೆದಿದ್ದ ಪತ್ರ ವಿಮಾನದ ಶೌಚಾಲಯದಲ್ಲಿ ಪತ್ತೆಯಾಗಿತ್ತು. ಇದರಿಂದಾಗಿ ವಿಮಾನ ತುರ್ತು ಭೂಸ್ಪರ್ಶ ಮಾಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನವನ್ನು ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಕೊಂಡೊಯ್ಯಲಾಗುವುದು ಎಂದೂ ಪತ್ರದಲ್ಲಿ ಬರೆಯಲಾಗಿತ್ತು.

ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಬಾಂಬ್ ನಿಷ್ಕ್ರಿಯ ದಳದವರು ಶೋಧ ಕಾರ್ಯ ನಡೆಸಿದಾಗ ಇದು ಹುಸಿ ಬೆದರಿಕೆ ಪತ್ರ. ವಿಮಾನದಲ್ಲಿ ಬಾಂಬ್ ಇಲ್ಲ ಎನ್ನುವ ಅಂಶ ತಿಳಿದುಬಂದಿದೆ.

ADVERTISEMENT

ಸಂಶಯದ ಮೇರೆಗೆ ತನಿಖೆ ನಡೆಸಿದಾಗ, ವಿಮಾನದ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದ ಬಿರ್ಜು ಸಲ್ಲಾ ಎಂಬ ಆಭರಣ ವ್ಯಾಪಾರಿ ಈ ಬೆದರಿಕೆ ಪತ್ರ ಇರಿಸಿರುವುದು ಎಂದು ತಿಳಿದುಬಂದಿದೆ. ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುಜರಾತ್‌ನ ಅಮ್ರೇಲಿ ಜಿಲ್ಲೆಯ ರಜುಲಾ ಪಟ್ಟಣದವನಾದ ಈತ ಸದ್ಯ ಮುಂಬೈನಲ್ಲಿ ನೆಲೆಸಿದ್ದಾನೆ. ಈ ಹಿಂದೆ ಜೆಟ್‌ ಏರ್‌ವೇಸ್ ವಿಮಾನಕ್ಕೆ ಜಿರಲೆ ತಂದಿದ್ದ ಈತ ಬಳಿಕ ವಿಮಾನಯಾನ ಸಂಸ್ಥೆಯನ್ನು ದೂರಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

115 ಪ್ರಯಾಣಿಕರಿದ್ದ ಜೆಟ್‌ ಏರ್‌ವೇಸ್‌ ವಿಮಾನ ಸೋಮವಾರ ನಸುಕಿನ 2.55ಕ್ಕೆ ಹೊರಟಿತ್ತು. ಬೆದರಿಕೆ ಪತ್ರದ ಕಾರಣ 3.45ಕ್ಕೆ ಅಹಮದಾಬಾದ್‌ ನಿಲ್ದಾಣದಲ್ಲಿ ವಿಮಾನವನ್ನು ಇಳಿಸಲಾಗಿತ್ತು.

ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ವಿಮಾನದ ತಪಾಸಣೆ ನಡೆಸಿದರೂ, ಯಾವುದೇ ಅಹಿತಕರ ವಸ್ತುಗಳು ಪತ್ತೆಯಾಗಿರಲಿಲ್ಲ. ತಪಾಸಣೆ ಪೂರ್ಣಗೊಂಡ ನಂತರ ಬೆಳಿಗ್ಗೆ 10.30ಕ್ಕೆ ದೆಹಲಿಗೆ ವಿಮಾನ ಪ್ರಯಾಣಿಸಿತ್ತು.

ಈ ಕುರಿತು ಪ್ರತಿಕ್ರಿಯಿಸಿದ್ದ ಕೇಂದ್ರ ವಿಮಾನಯಾನ ಸಚಿವ ಅಶೋಕ್‌ ಗಜಪತಿ ರಾಜು, ‘ಕೃತ್ಯ ಎಸಗಿದ ವ್ಯಕ್ತಿಯನ್ನು ಗುರುತಿಸಲಾಗಿದ್ದು, ವಿಮಾನಯಾನ ನಿಷೇಧ ಪಟ್ಟಿಗೆ ಸೇರಿಸುವಂತೆ ಸೂಚಿಸಲಾಗಿದೆ’ ಎಂದು ಹೇಳಿದ್ದರು.

ಎನ್‌ಐಎಯಿಂದ ತನಿಖೆ?
ಪ್ರಕರಣ ಸಂಬಂಧ ಗುಜರಾತ್ ಪೊಲೀಸರೊಂದಿಗೆ ಸಂಪರ್ಕದಲ್ಲಿರುವುದಾಗಿ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಮುಖ್ಯಸ್ಥ ವೈ.ಸಿ. ಮೋದಿ ತಿಳಿಸಿದ್ದಾರೆ. 

ಅಪಹರಣ ನಿಯಂತ್ರಣ ಕಾನೂನು ಅಡಿಯಲ್ಲಿ ಗುಜರಾತ್ ಪೊಲೀಸರು ಪ್ರಕರಣ ದಾಖಲಿಸಿದ್ದರೆ, ಆಗ ಎನ್‌ಐಎ ಪ್ರಕರಣವನ್ನು ಕೈಗೆತ್ತಿಕೊಳ್ಳಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.