ADVERTISEMENT

ಹೆಡ್ಲಿ ತಾತ್ಕಾಲಿಕ ಹಸ್ತಾಂತರಕ್ಕೆ ಭಾರತ ಬೇಡಿಕೆ

ಸಂಕ್ಷಿಪ್ತ ಸುದ್ದಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2013, 19:59 IST
Last Updated 2 ಜೂನ್ 2013, 19:59 IST

ನವದೆಹಲಿ (ಪಿಟಿಐ): ಸದ್ಯ ಅಮೆರಿಕ ವಶದಲ್ಲಿರುವ ಮುಂಬೈ ಮೇಲಿನ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರ ಡೇವಿಡ್ ಹೆಡ್ಲಿ ಮತ್ತು ಅವನ ಸಹಚರ ತಹಾವುರ್ ಹುಸೇನ್ ರಾಣಾ ಅವರ ವಿಚಾರಣೆಗಾಗಿ ಒಂದು ವರ್ಷದ ತಾತ್ಕಾಲಿಕ ಅವಧಿಗೆ ತನಗೆ ಹಸ್ತಾಂತರಿಸುವಂತೆ ಭಾರತ ಮತ್ತೆ ಬೇಡಿಕೆ ಇಟ್ಟಿದೆ.

ಮೇ 20ರಿಂದ 22ರವರೆಗೆ ಇಂಡೋ-ಅಮೆರಿಕ ರಕ್ಷಣಾ ಮಾತುಕತೆ ವೇಳೆ ಭಾರತ ತನ್ನ ಈ ಬೇಡಿಕೆಯನ್ನು ಅಮೆರಿಕದ ರಕ್ಷಣಾ ಅಧಿಕಾರಿಗಳ ಮುಂದಿಟ್ಟಿದೆ. ಮುಂಬೈ ಮೇಲಿನ ದಾಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ಹೆಡ್ಲಿ ಮತ್ತು ರಾಣಾನನ್ನು ವಶಕ್ಕೆ ಪಡೆಯುವ ನವದೆಹಲಿಯ ಈ ಬೇಡಿಕೆಗೆ ವಾಷಿಂಗ್ಟನ್ ಪೂರಕವಾಗಿ ಸ್ಪಂದಿಸಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿಯ ನಿರಂತರ ಒತ್ತಡದ ಪರಿಣಾಮ ಇಬ್ಬರೂ ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸುವ ಅಗತ್ಯವನ್ನು ಅಲ್ಲಿಯ ಆಡಳಿತ ಮನಗಂಡಿದೆ. ದಾಳಿಗೆ ಸಂಬಂಧಿಸಿದ ಮತ್ತಷ್ಟು ರಹಸ್ಯ ಮಾಹಿತಿಗಳನ್ನು ಪಡೆಯಲು ರಾಣಾನನ್ನು ಪ್ರಶ್ನಿಸುವ ಅವಕಾಶಕ್ಕಾಗಿ ಪದೇಪದೇ ಭಾರತ ಮನವಿ ಸಲ್ಲಿಸಿದರೂ ಅಮೆರಿಕ  ಇಲ್ಲಿಯವರೆಗೂ ಅವಕಾಶ ನೀಡಿಲ್ಲ.  

26/11ರ ಮುಂಬೈ ಮೇಲೆ ಲಷ್ಕರ್-ಎ-ತೈಯಬಾ ನಡೆಸಿದ ಈ ದಾಳಿಯ ಸಂಚನ್ನು ಪಾಕಿಸ್ತಾನ ಮೂಲದ ಅಮೆರಿಕ ಪ್ರಜೆ ಹೆಡ್ಲಿ ರೂಪಿಸಿದ್ದ. ಈ ದುಷ್ಕೃತ್ಯಕ್ಕೆ ಅವನ ಸ್ನೇಹಿತ, ಪಾಕಿಸ್ತಾನ ಮೂಲದ ಕೆನಡಾ ಪ್ರಜೆ ರಾಣಾ ನೆರವು ನೀಡಿದ್ದ. ಡ್ಯಾನಿಶ್ ಪತ್ರಿಕೆ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಅಮೆರಿಕ ನ್ಯಾಯಾಲಯ ರಾಣಾನಿಗೆ 14 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆದರೆ, ಮುಂಬೈ ಬಾಂಬ್ ಸ್ಫೋಟ ಪ್ರಕರಣದ ಸಂಬಂಧ ಯಾವುದೇ ಶಿಕ್ಷೆ ನೀಡಿಲ್ಲ.

ಕಾಶ್ಮೀರ: ಮೂವರು ಉಗ್ರರ ಹತ್ಯೆ
ಶ್ರೀನಗರ (ಐಎಎನ್‌ಎಸ್): ದಕ್ಷಿಣ ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಸೇನೆ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಮೂವರು ಗೆರಿಲ್ಲಾ ಉಗ್ರರನ್ನು ಗುಂಡಕ್ಕಿ ಕೊಲ್ಲಲಾಗಿದೆ.

ಕಾಶ್ಮೀರ ಕಣಿವೆಯ ಗಡಿ ನಿಯಂತ್ರಣ ರೇಖೆಯೊಳಗೆ (ಎಲ್‌ಒಸಿ) ಗುಟ್ಟಾಗಿ ಒಳನುಸುಳುತ್ತಿದ್ದ ಉಗ್ರರನ್ನು  ಭಾರತದ ಸೈನಿಕರು ಶನಿವಾರ ರಾತ್ರಿ ಕೊಂದಿದ್ದಾರೆ ಎಂದು ಸೇನೆ ವಕ್ತಾರ ತಿಳಿಸಿದ್ದಾರೆ. ಈ ದಾಳಿಗಳ ವೇಳೆ ಭಾರತದ ಒಬ್ಬ ಬ್ರಿಗೇಡಿಯರ್ ಹಾಗೂ ಎರಡು ಸೇನಾ ತಂಡಗಳ ಕೆಲವು ಯೋಧರು ಗಾಯಗೊಂಡಿದ್ದರು.

ದೀಕ್ಷಿತ್ ವಿರುದ್ಧ ಕೇಜ್ರಿವಾಲ್ ಸ್ಪರ್ಧೆ
ನವದೆಹಲಿ (ಐಎಎನ್‌ಎಸ್):
ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಶೀಲಾದೀಕ್ಷಿತ್ ವಿರುದ್ಧ  ಆಮ್ ಆದ್ಮಿ

ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್ ಸ್ಪರ್ಧಿಸಲಿದ್ದಾರೆ.

ನವದೆಹಲಿಯಲ್ಲಿ ಭಾನುವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಕೇಜ್ರಿವಾಲ್ ಸ್ಪರ್ಧೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪಕ್ಷದ ಹಿರಿಯ ಮುಖಂಡ ಮನೀಷ್ ಸಿಸೋಡಿಯ ತಿಳಿಸಿದ್ದಾರೆ.

ಶೀಲಾ ದೀಕ್ಷಿತ್ ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಒಂದು ವೇಳೆ  ಕ್ಷೇತ್ರವನ್ನು ಬದಲಿಸಿದರೆ ಕೇಜ್ರಿವಾಲ್ ಸಹ ಕ್ಷೇತ್ರ ಬದಲಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ನವೆಂಬರ್‌ನಲ್ಲಿ ನಡೆಯಲಿರುವ ನವದೆಹಲಿ ವಿಧಾನಸಭಾ ಚುನಾವಣೆಗೆ 12 ಸ್ಥಾನಗಳಿಗೆ ಸ್ಪರ್ಧಿಸಲಿರುವ ಆಮ್ ಆದ್ಮಿ ಪಕ್ಷದ 44 ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನೂ ಪಕ್ಷ ಬಿಡುಗಡೆ ಮಾಡಿದೆ.

ಕೊಲ್ಲಿಗೆ ಕೇರಳ ಸಚಿವ
ತಿರುವನಂತಪುರ (ಐಎಎಎನ್‌ಎಸ್): ಹೊಸ ಕಾರ್ಮಿಕ ಕಾನೂನಿನಿಂದಾಗಿ ದೇಶ ತೊರೆಯುವ ಸಂಕಷ್ಟಕ್ಕೆ ಸಿಲುಕಿರುವ ಸೌದಿ ಅರೇಬಿಯಾ ಮತ್ತು ಕುವೈತ್‌ನಲ್ಲಿರುವ ಕೇರಳ ಮೂಲದ ಕಾರ್ಮಿಕರಿಗೆ ಅಗತ್ಯ ನೆರವು ನೀಡಲು ಕೇರಳ ಸಚಿವ ಕೆ.ಸಿ. ಜೋಸೆಫ್ ಅಲ್ಲಿಗೆ ತೆರಳಲಿದ್ದಾರೆ.

ಈ ಎರಡೂ ರಾಷ್ಟ್ರಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಉದ್ಯೋಗದಲ್ಲಿರುವ ಮಲೆಯಾಳಿಗಳು ಸ್ವದೇಶಕ್ಕೆ ಮರಳಲು ಕಲ್ಪಿಸಲಾಗಿರುವ ವ್ಯವಸ್ಥೆ ಮತ್ತು ಅನುಕೂಲತೆಗಳನ್ನು ಕುರಿತು ಅವರು ಆ ಎರಡೂ ರಾಷ್ಟ್ರಗಳಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳ ಜೊತೆ ಚರ್ಚಿಸಲಿದ್ದಾರೆ.

ಜೋಸೆಫ್ ಜೂನ್ 7-8ರಂದು ಸೌದಿ ಅರೇಬಿಯಾದಲ್ಲಿದ್ದು 9ರಂದು ಕುವೈತ್‌ಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೊಸ ಕಾರ್ಮಿಕ ಕಾನೂನು ಜಾರಿಗೆ ಬಂದ ನಂತರ ಸೂಕ್ತ ದಾಖಲೆಗಳಿಲ್ಲದ 12ಕ್ಕೂ ಹೆಚ್ಚು ಮಲೆಯಾಳಿಗಳನ್ನು ರಾಯಭಾರ ಕಚೇರಿ ಅಧಿಕಾರಿಗಳ ಗಮನಕ್ಕೆ ತಾರದೆ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.