ADVERTISEMENT

ಹೆಡ್ಲಿ ಸೇರಿ 9 ಮಂದಿ ವಿರುದ್ಧ ಆರೋಪ ಪಟ್ಟಿ: ಕಾಯ್ದಿಟ್ಟ ತೀರ್ಪು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 19:30 IST
Last Updated 4 ಫೆಬ್ರುವರಿ 2012, 19:30 IST

ನವದೆಹಲಿ (ಐಎಎನ್‌ಎಸ್): ಮುಂಬೈ ಸೇರಿದಂತೆ ದೇಶದ ಇತರೆಡೆ ವಿಧ್ವಂಸಕ ಕೃತ್ಯಗಳನ್ನು ನಡೆಸಿದ ಆರೋಪ ಎದುರಿಸುತ್ತಿರುವ ಡೇವಿಡ್ ಹೆಡ್ಲಿ ಮತ್ತು ಇತರ ಎಂಟು ಮಂದಿ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಸತ್ಯಾಂಶವಿದೆ ಹುರುಳಿದೆ ಎಂದು ಅಭಿಪ್ರಾಯಪಟ್ಟಿರುವ ದೆಹಲಿ ನ್ಯಾಯಾಲಯವು ಈ ಕುರಿತ ತೀರ್ಪನ್ನು ಕಾಯ್ದಿರಿಸಿದೆ.

ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯವು, ಈವರೆಗೆ ಯಾವುದೇ ಆರೋಪಿಗಳನ್ನು ಬಂಧಿಸದ ಕಾರಣ ಪ್ರಕರಣವನ್ನು ಕಳೆದ ತಿಂಗಳು ಮುಂದೂಡಿತ್ತು. ಆದರೆ,   ಪ್ರಾಸಿಕ್ಯೂಷನ್ ನಿಲುವನ್ನು ಶನಿವಾರ ಆಲಿಸಿದ ನ್ಯಾಯಾಧೀಶ ಎಚ್.ಎಸ್. ಶರ್ಮಾ ಫೆ. 18ರವರೆಗೆ ತೀರ್ಪು ಕಾಯ್ದಿರಿಸಿದ್ದಾರೆ.

ತನಿಖೆಗೆ ಸಹಾಯ ಮಾಡುವಂತೆ ಎನ್‌ಐಎ ಅಮೆರಿಕ ಸರ್ಕಾರಕ್ಕೆ ಈ ಹಿಂದೆಯೇ ಮನವಿ ಪತ್ರ (ಲೆಟರ್ ರೊಗೇಟರಿ) ಬರೆದಿದೆ.

ಮುಂಬೈನಲ್ಲಿ 2008ರಲ್ಲಿ ದಾಳಿ ನಡೆದ ಮೂರು ವರ್ಷಗಳ ತರುವಾಯ ಅಂದರೆ, ಕಳೆದ ಡಿ. 24ರಂದು ಎನ್‌ಐಎ ಈ ಆರೋಪಪಟ್ಟಿ ಸಲ್ಲಿಸಿದೆ. ಲಷ್ಕರ್-ಎ-ತೊಯ್ಬಾ ಸಂಘಟನೆ ಸಂಸ್ಥಾಪಕ ಹಫೀಜ್ ಸಯೀದ್ ಸೇರಿದಂತೆ ಎಂಟು ಮಂದಿ ಹಾಗೂ ಡೇವಿಡ್ ಹೆಡ್ಲಿ ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಯಲು ಕಾರಣಕರ್ತರು. ಇದಕ್ಕೆ ಐಎಸ್‌ಐನ ಇಬ್ಬರು ಅಧಿಕಾರಗಳ ನೆರವೂ ಇತ್ತು ಎಂದು ಎನ್‌ಐಎ ಆಪಾದಿಸಿದೆ.

ಇವರೆಲ್ಲರೂ ಭಾರತದ ಪ್ರವಾಸಿ ತಾಣಗಳನ್ನು ಮತ್ತು ಪ್ರವಾಸಿಗರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲು ಸಂಚು ನಡೆಸಿ ಕೆಲವು ಪ್ರಯತ್ನಗಳಲ್ಲಿ ಸಫಲರಾದರು ಎಂದು ಸರ್ಕಾರಿ ವಕೀಲರು ನ್ಯಾಯಾಲಯದಲ್ಲಿ ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.