ADVERTISEMENT

ಹೆತ್ತ ತಾಯಿಯ ಸುಪರ್ದಿಗೆ ಮಗು

​ಪ್ರಜಾವಾಣಿ ವಾರ್ತೆ
Published 30 ಮೇ 2018, 19:30 IST
Last Updated 30 ಮೇ 2018, 19:30 IST
ಹೆತ್ತ ತಾಯಿಯ ಸುಪರ್ದಿಗೆ ಮಗು
ಹೆತ್ತ ತಾಯಿಯ ಸುಪರ್ದಿಗೆ ಮಗು   

ನವದೆಹಲಿ: ಸಾಕಿ ಬೆಳೆಸಿದ ಹೆಣ್ಣು ಮಗುವನ್ನು ತಮ್ಮ ಸುಪರ್ದಿಗೇ ವಹಿಸುವಂತೆ ಕೋರಿ ಸಾಕು ತಂದೆ ಮತ್ತು ತಾಯಿ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕರಿಸಿರುವ ಸುಪ್ರೀಂ ಕೋರ್ಟ್‌, ಹೆತ್ತ ತಾಯಿಗೇ ಮಗುವನ್ನು ಬಿಟ್ಟುಕೊಡುವಂತೆ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ.

ಕೆನಡಾದ ಒಂಟಾರಿಯೋದಲ್ಲಿ 2010ರ ಜೂನ್ 4ರಂದು ಹೆಣ್ಣು ಮಗುವನ್ನು ಹೆತ್ತಿದ್ದ ಮಹಿಳೆಯು, ಪತಿಯೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ವಿಚ್ಛೇದನ ಕೋರಿ ಕಾನೂನು ಹೋರಾಟ ನಡೆಸಿದ್ದರು. ಜೊತೆಗೆ ತನ್ನ ಉದ್ಯೋಗದ ನಿರ್ವಹಣೆಯ ಜವಾಬ್ದಾರಿ ಹೊಂದಿದ್ದರಿಂದ ಬೆಂಗಳೂರಿನಲ್ಲಿ ಕಿರಿಯ ಪುತ್ರಿಯೊಂದಿಗೆ ವಾಸಿಸುತ್ತಿದ್ದ ತನ್ನ ತಾಯಿಯ ಸುಪರ್ದಿಗೆ ಮಗುವನ್ನು ಒಪ್ಪಿಸಿದ್ದರು.

ಮಹಿಳೆಯ ಕಿರಿಯ ಸೋದರಿ ಹಾಗೂ ಅವರ ಪತಿ ಪ್ರೀತಿಯಿಂದಲೇ ಎಂಟು ವರ್ಷಗಳ ಕಾಲ ಹೆಣ್ಣು ಮಗುವನ್ನು ಪೋಷಿಸಿದ್ದರು. ಮಗುವನ್ನು ದತ್ತು ನೀಡುವುದಾಗಿಯೂ ಮಹಿಳೆ ತನ್ನ ಸೋದರಿಗೆ ಇ– ಮೇಲ್‌ ಮೂಲಕ ತಿಳಿಸಿದ್ದರು.

ADVERTISEMENT

2012ರ ಜನವರಿ 18ರಂದು ಪತಿಯಿಂದ ವಿಚ್ಛೇದನ ಪಡೆದಿದ್ದ ಮಹಿಳೆ, ಕೆನಡಾದಿಂದ ಬಂದ ನಂತರ ತನ್ನ ಮಗುವನ್ನು ವಾಪಸ್‌ ನೀಡುವಂತೆ ಕೋರಿದಾಗ, ದತ್ತು ನೀಡುವುದಾಗಿ ತಿಳಿಸಿದ್ದರಿಂದ ಮಗುವನ್ನು ಮರಳಿಸುವುದಿಲ್ಲ ಎಂಬ ಉತ್ತರ ಕೇಳಿ ಆತಂಕಕ್ಕೆ ಒಳಗಾಗಿದ್ದರು.

ಈ ಕುರಿತು ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಲ್ಲದೆ, ಮಗುವನ್ನು ಕೋರಿ ಹೈಕೋರ್ಟ್‌ನಲ್ಲಿ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನೂ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ವಿಭಾಗೀಯ ಪೀಠವು, ಅಕ್ರಮವಾಗಿ ಮಗುವನ್ನು ವಶದಲ್ಲಿ ಇರಿಸಿಕೊಳ್ಳದೆ, ಹೆತ್ತ ತಾಯಿಯ ವಶಕ್ಕೇ ನೀಡುವಂತೆ ಕಳೆದ ಏಪ್ರಿಲ್ 19ರಂದು ಆದೇಶ ನೀಡಿತ್ತು.

ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ಸಾಕು ತಂದೆ, ಆರೋಗ್ಯ ಸಂಬಂಧಿ ಸಮಸ್ಯೆ ಎದುರಿಸುತ್ತಿದ್ದ ಮಗುವನ್ನು ಜತನದಿಂದ ಬೆಳೆಸಿದ್ದು, ಮಗುವನ್ನು ತಮ್ಮ ವಶಕ್ಕೇ ನೀಡುವಂತೆ ಕೋರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಎಲ್‌.ನಾಗೇಶ್ವರ ರಾವ್‌ ಹಾಗೂ ಮೋಹನ್‌ ಶಾಂತನ ಗೌಡರ್‌ ಅವರಿದ್ದ ಪೀಠ ಅರ್ಜಿಯನ್ನು ತಿರಸ್ಕರಿಸಿ ಮಗುವನ್ನು ಹೆತ್ತ ತಾಯಿಯ ವಶಕ್ಕೆ ನೀಡುವಂತೆ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.