ಶಿಮ್ಲಾ (ಐಎಎನ್‌ಎಸ್/ಪಿಟಿಐ): ಹಿಮಾಚಲ ಪ್ರದೇಶದಲ್ಲಿ ಇದೇ 27ರಿಂದ ಭಾರಿ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಮಧ್ಯೆ, ರಕ್ಷಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ವಾಯುಪಡೆಯ ಎರಡು ಮತ್ತು ರಾಜ್ಯ ಸರ್ಕಾರದ ಒಂದು ಹೆಲಿಕಾಪ್ಟರ್ ಕಾರ್ಯಾಚರಣೆ ಸ್ಥಗಿತ ಮಾಡಿವೆ.
ಶನಿವಾರ ಮಧ್ಯಾಹ್ನದ ವರೆಗೂ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ರಾಜ್ಯ ಸರ್ಕಾರದ ಹೆಲಿಕಾಪ್ಟರ್ 50 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದೆ. ಇದನ್ನು ಮಂಡಿ ಲೋಕಸಭಾ ಕ್ಷೇತ್ರದ ಉಪಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇಲ್ಲಿ ಭಾನುವಾರ ಮತದಾನ ನಡೆಯಲಿದೆ.
ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳು ತಾಂತ್ರಿಕ ತೊಂದರೆ ಕಾರಣ ಶನಿವಾರ ಹಾರಾಟ ನಡೆಸಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಳು ವಿದೇಶಿ ಪ್ರವಾಸಿಗರನ್ನು ಯೋಧರು ರಕ್ಷಿಸಿದ್ದಾರೆ.
ಎಂಟು ದಿನಗಳಿಂದ ಕಿನ್ನೌರ್ ಜಿಲ್ಲೆಯ ಪೂಹ್, ಟಬೊ ಮತ್ತು ನಾಕೊ ಪ್ರದೇಶಗಳಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಜನರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸುವ ಕಾರ್ಯ ಮುಂದುವರಿದಿದೆ. ಈ ಪ್ರದೇಶಗಳಲ್ಲಿ ಎಷ್ಟು ಜನ ಸಂಕಷ್ಟದಲ್ಲಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೆ ಇಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಇನ್ನೂ ನೂರಾರು ಜನರು ಸಿಕ್ಕಿಹಾಕಿಕೊಂಡಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಭೂಕುಸಿತದಿಂದ ಭಾರತ-ಟೆಬೆಟ್ ರಾಷ್ಟ್ರೀಯ ಹೆದ್ದಾರಿಯ ಹಲವು ಕಡೆ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ನೂರಾರು ವಾಹನಗಳು ಮಾರ್ಗ ಮಧ್ಯೆಯೇ ಸಿಕ್ಕಿಹಾಕಿಕೊಂಡಿವೆ. ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರು ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿಯ ಪರಿಶೀಲನೆ ನಡೆಸುತ್ತಿದ್ದಾರೆ.
ನದಿಗಳಲ್ಲಿ ತಗ್ಗಿದ ನೀರು
ಲಖನೌ (ಪಿಟಿಐ): ಕಳೆದ 24 ಗಂಟೆಗಳ ಅವಧಿಯಲ್ಲಿ ಮಳೆ ಬೀಳದೇ ಇರುವುದರಿಂದ ಉತ್ತರ ಪ್ರದೇಶದ ಶಾರದಾ ಮತ್ತು ಘಾಘ್ರಾ ಸೇರಿದಂತೆ ಪ್ರಮುಖ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಸ್ವಲ್ಪ ಕಡಿಮೆಯಾಗಿದೆ. ಆದರೂ, ಹಲವು ಪ್ರದೇಶಗಳಲ್ಲಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಫತೇಗಡದಿಂದ ಬಲಿಯಾದತ್ತ ಹರಿಯುವ ಗಂಗಾ ನದಿಯ ನೀರಿನ ಮಟ್ಟ ಏರುತ್ತಿದೆ ಎಂದು ಕೇಂದ್ರ ಜಲ ಆಯೋಗದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.