ADVERTISEMENT

ಹೈಕೋರ್ಟ್‌ ಆದೇಶಕ್ಕೆ ‘ಸುಪ್ರೀಂ’ ತಡೆ

ಕೈಕೊಂಡ್ರಹಳ್ಳಿ ಕೆರೆ ಬಫರ್‌ ನಿಯಮ ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 19:47 IST
Last Updated 10 ಮಾರ್ಚ್ 2018, 19:47 IST

ನವದೆಹಲಿ: ಕೆರೆಗಳ ಬಫರ್ ವಲಯದ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡದಿರುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆದೇಶ ನೀಡಿದ್ದರೂ, ಯಾವುದೇ ರೀತಿಯ ನಿರ್ಬಂಧ ಹೇರದಂತೆ ರಾಜ್ಯ ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ತಡೆ ನೀಡಿದೆ.

ಬೆಂಗಳೂರಿನ ಸರ್ಜಾಪುರ ಮುಖ್ಯ ರಸ್ತೆಯಲ್ಲಿರುವ ಕೈಕೊಂಡ್ರಹಳ್ಳಿ ಕೆರೆಯ ವ್ಯಾಪ್ತಿಯಲ್ಲಿ ಎಸ್‌ಜೆಆರ್ ಪ್ರೈಂ ಕಾರ್ಪೊರೇಷನ್‌ ಲಿಮಿಟೆಡ್‌ ಸಂಸ್ಥೆ ನಿರ್ಮಿಸಿರುವ 529 ಫ್ಲ್ಯಾಟ್‌ಗಳಿರುವ ಅಪಾರ್ಟ್‌ಮೆಂಟ್‌ ಅನ್ನು ಪರಭಾರೆ ಮಾಡದಂತೆ, ವಾಸದ ಪ್ರಮಾಣಪತ್ರ ನೀಡದಂತೆ ಎನ್‌ಜಿಟಿ ಆದೇಶ ನೀಡಿದ್ದರೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಕ್ರಮ ಕೈಗೊಳ್ಳದಿರುವಂತೆ ಹೈಕೋರ್ಟ್‌ ಸೂಚಿಸಿತ್ತು.

ಅಲ್ಲದೆ, ನ್ಯಾಯಾಲಯದ ನಿರ್ದಿಷ್ಟ ಅನುಮತಿ ಪಡೆಯದೆಯೇ ಅರ್ಜಿದಾರರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಕೂಡದು ಎಂದೂ ಹೈಕೋರ್ಟ್‌ ಆದೇಶಿಸಿತ್ತು.

ADVERTISEMENT

ರಾಜ್ಯ ಹೈಕೋರ್ಟ್‌ ಕಳೆದ ಜನವರಿ 10ರಂದು ನೀಡಿರುವ ಈ ಮಧ್ಯಂತರ ಆದೇಶ ಪ್ರಶ್ನಿಸಿ ಕೆ.ಎಸ್‌. ರವಿ ಅವರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ಆದರ್ಶ ಕುಮಾರ್‌ ಗೋಯಲ್‌ ಹಾಗೂ ಆರ್‌.ಎಫ್‌. ನಾರಿಮನ್‌ ಅವರಿದ್ದ ಪೀಠವು, ಈ ಫ್ಲ್ಯಾಟ್‌ಗಳ ಮೇಲೆ ಮೂರನೇ ವ್ಯಕ್ತಿಯ ಹಕ್ಕು ಸ್ಥಾಪನೆಗೆ ಅವಕಾಶ ನೀಡಬಾರದು ಎಂದು ಸೂಚಿಸಿತು.

ಎನ್‌ಜಿಟಿಯಲ್ಲಿ ವಿಚಾರಣೆ ಬಾಕಿ ಇರುವಾಗಲೇ ಹೈಕೋರ್ಟ್ ಆದೇಶ ಹೊರಡಿಸಿರುವುದು ಕಾನೂನುಬದ್ಧವಾಗಿ ಅಸಮರ್ಥನೀಯ. ಅಲ್ಲದೆ, ವಿಚಾರಣೆ ನಡೆಯುತ್ತಿರುವಾಗಲೇ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸುವ ಮೂಲಕ ಜಾಣತನ ಪ್ರದರ್ಶಿಸಿರುವ ಪ್ರತಿ ದೂರುದಾರರು ಕಾನೂನಿನ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರಾದ ಮೀನಾಕ್ಷಿ ಅರೋರಾ ಹಾಗೂ ಪಿ.ರಾಮಪ್ರಸಾದ್‌ ನ್ಯಾಯಪೀಠದ ಗಮನ ಸೆಳೆದರು.

ಕೈಕೊಂಡ್ರಹಳ್ಳಿ ಕೆರೆಯ ಬಫರ್‌ ವಲಯದ ನಿಯಮ ಉಲ್ಲಂಘಿಸಿ ವಾಣಿಜ್ಯ ಸಂಕೀರ್ಣ ನಿರ್ಮಿಸಿರುವುದಕ್ಕೆ ಸಂಬಂಧಿಸಿದಂತೆ ಎನ್‌ಜಿಟಿ ಆದೇಶ ನೀಡಿದ್ದರೂ ಯಾವುದೇ ನಿರ್ಬಂಧ ಹೇರದಂತೆ ಕೆ.ಎನ್‌. ಮೋಹನ್‌ ಸಲ್ಲಿಸಿದ್ದ ರಿಟ್‌ ಅರ್ಜಿಯ ಕುರಿತೂ ಹೈಕೋರ್ಟ್‌ ನೀಡಿದ್ದ ಆದೇಶವನ್ನು ರದ್ದುಪಡಿಸಿ ಆರ್‌.ಎಫ್‌. ನಾರಿಮನ್‌ ಹಾಗೂ ನವೀನ್‌ ಸಿನ್ಹಾ ಅವರಿದ್ದ ಪೀಠವು ಕಳೆದ ಫೆಬ್ರುವರಿ 19ರಂದು ಆದೇಶ ನೀಡಿತ್ತು.

ಬೆಂಗಳೂರಿನಲ್ಲಿರುವ ಕೆರೆಗಳ 75 ಮೀಟರ್ ವ್ಯಾಪ್ತಿಯನ್ನು ಬಫರ್ ವಲಯಕ್ಕೆ ಒಳಪಡಿಸಿ ಎನ್‌ಜಿಟಿಯ ಪ್ರಧಾನ ಪೀಠವು 20916ರ ಮೇ 4ರಂದು ಆದೇಶ ಹೊರಡಿಸಿದ್ದು, ಯಾವುದೇ ಕಾರಣಕ್ಕೂ ಕೆರೆಗಳು ಮತ್ತು ರಾಜ ಕಾಲುವೆಗಳಿಗೆ ನಿಗದಿ ಮಾಡಿರುವ ಬಫರ್‌ ವಲಯವನ್ನು ಉಲ್ಲಂಘಿಸುವಂತಿಲ್ಲ ಎಂದು ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.