ADVERTISEMENT

ಹೊಸ ಕರಡು ನಿಯಮ ಸಿದ್ಧ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 20:23 IST
Last Updated 11 ಏಪ್ರಿಲ್ 2018, 20:23 IST
ಹೊಸ ಕರಡು ನಿಯಮ ಸಿದ್ಧ
ಹೊಸ ಕರಡು ನಿಯಮ ಸಿದ್ಧ   

ನವದೆಹಲಿ: ಕಸಾಯಿಖಾನೆಗೆ ಜಾನು ವಾರು ಮಾರಾಟ ಮಾಡುವುದನ್ನು ನಿಷೇಧಿಸಿ ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯವು ವರ್ಷದ ಹಿಂದೆ ರೂಪಿಸಿದ್ದ ನಿಯಮವನ್ನು ಬದಲಾಯಿಸಲಾಗಿದೆ.

ಜಾನುವಾರು ಅಭಿವೃದ್ಧಿಗಾಗಿ ರೂಪಿಸಿದ್ದ ಈ ನಿಯಮಕ್ಕೆ ದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಜಾನುವಾರು ಮಾರಾಟದ ಸಂದರ್ಭದಲ್ಲಿ ಮಾರುವವರು ಮತ್ತು ಖರೀದಿಸುವವರು ‘ಈ ಜಾನುವಾರನ್ನು ವಧಿಸುವುದಿಲ್ಲ’ ಎಂಬ ಮುಚ್ಚಳಿಕೆ ಕೊಡಬೇಕು ಎಂದು ಹಳೆಯ ನಿಯಮದಲ್ಲಿ ಹೇಳಲಾಗಿತ್ತು.  ಆದರೆ, ಹೊಸ ನಿಯಮದಲ್ಲಿ ಜಾನುವಾರು ವಧೆಯ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ.

ADVERTISEMENT

ಅನಾರೋಗ್ಯಪೀಡಿತ ಮತ್ತು ಗರ್ಭಧರಿಸಿರುವ ಜಾನುವಾರುಗಳನ್ನು ಮಾರಾಟ ಮಾಡುವಂತಿಲ್ಲ ಎಂಬ ಷರತ್ತನ್ನು ಹೊಸ ನಿಯಮದಲ್ಲಿ ಸೇರಿಸ
ಲಾಗಿದೆ.  ಜಾನುವಾರುಗಳ ಅಂತರರಾಜ್ಯ ಸಾಗಾಟಕ್ಕೆ ಯಾವುದೇ ನಿರ್ಬಂಧ ಹೇರಲಾಗಿಲ್ಲ. ಇದರಿಂದ ರೈತರು, ಸಾಗಾಣಿಕೆದಾರರು ಮತ್ತು ಜಾನುವಾರು ವ್ಯಾಪಾರಿಗಳಿಗೆ ನಿರಾಳವಾಗಲಿದೆ.

ಜಾನುವಾರು ಸಾಗಾಟದ ಸಂದರ್ಭದಲ್ಲಿ ‘ಗೋರಕ್ಷಕರು’ ತಡೆ ಒಡ್ಡಿ ಹಲ್ಲೆ ನಡೆಸಿದ ಹಲವು ಪ್ರಕರಣ ನಡೆದಿವೆ. ಇಂತಹ ಸಂದರ್ಭದಲ್ಲಿ ಹಲವರು
ಮೃತಪಟ್ಟಿದ್ದರು.

‘ಜಾನುವಾರು ಮಾರುಕಟ್ಟೆ’ ವ್ಯಾಖ್ಯಾನ ಬದಲು: ಜಾನುವಾರು ಮಾರುಕಟ್ಟೆ ಅಥವಾ ಕಸಾಯಿಖಾನೆಯ ಸಮೀಪದಲ್ಲಿ ಇರುವ ತಂಗುದೊಡ್ಡಿಗಳನ್ನೂ ಮಾರುಕಟ್ಟೆ ಎಂದೇ ಹಳೆಯ ನಿಯಮದಲ್ಲಿ ಪರಿಗಣಿಸಲಾಗಿತ್ತು. ಮಾಂಸ ಸಂಸ್ಕರಣ ಘಟಕಗಳು ಕೂಡ ದೊಡ್ಡ ತಂಗುದೊಡ್ಡಿಯನ್ನು ಹೊಂದಿರುತ್ತವೆ. ಇದರಿಂದಾಗಿ ಸಂಸ್ಕರಣ ಘಟಕಗಳಿಗೆ ವಯಸ್ಸಾದ ಜಾನುವಾರುಗಳನ್ನು ರೈತರು ಮಾರಾಟ ಮಾಡುವುದನ್ನು ತಡೆ ಯಲು ಈ ಮೊದಲು ಅವಕಾಶ ಇತ್ತು. ‘ಜಾನುವಾರು ಮಾರುಕಟ್ಟೆ’ಯ ವ್ಯಾಖ್ಯೆ ಈಗ ಬದಲಾಯಿಸಲಾಗಿದೆ.

ಈ ಬದಲಾವಣೆಯಿಂದ ಮಾಂಸ ಉದ್ಯಮಕ್ಕೆ ಅನುಕೂಲವಾಗಲಿದೆ. ಜಾನುವಾರು ಜಾತ್ರೆಗಳ ಮೂಲಕ ದೇಶದ ಗಡಿಯಾಚೆಗಿನ ಪ್ರದೇಶಗಳಿಗೆ ಜಾನುವಾರುಗಳನ್ನು ಪೂರೈಕೆ ಮಾಡಬಾರದು ಎಂಬ ಹೊಸ ನಿಯಮ ಸೇರ್ಪಡೆಯಾಗಿದೆ.

ಹಳೆಯ ನಿಯಮದಲ್ಲಿ 23 ಷರತ್ತುಗಳು ಮತ್ತು ಹಲವು ಉಪಷರ ತ್ತುಗಳಿದ್ದವು. ಹೊಸ ನಿಯಮದಲ್ಲಿ 16 ಷರತ್ತುಗಳಷ್ಟೇ ಇವೆ. ಜತೆಗೆ, ಜಿಲ್ಲಾ ಪಶುವೈದ್ಯಾಧಿಕಾರಿಯ ಕೆಲಸದ ಹೊರೆಯನ್ನು ಕಡಿಮೆ ಮಾಡಲಾಗಿದೆ.

ಕೇಂದ್ರವು ಕಳೆದ ವರ್ಷ ಜಾರಿಗೆ ತಂದ ನಿಯಮಕ್ಕೆ ಮೊದಲಿಗೆ, ಮದ್ರಾಸ್‌ ಹೈಕೋರ್ಟ್‌ ತಡೆ ನೀಡಿತ್ತು. ಈ ತಡೆಯನ್ನು ಸುಪ್ರೀಂ ಕೋರ್ಟ್‌ ಇಡೀ ದೇಶಕ್ಕೆ ವಿಸ್ತರಿಸಿತ್ತು. ಹೊಸ ನಿಯಮವನ್ನು ರೂಪಿಸುವುದಾಗಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಹೇಳಿತ್ತು. ‘ಸರ್ಕಾರವು ಇದನ್ನೊಂದು ಪ್ರತಿಷ್ಠೆಯ ವಿಚಾರ ಎಂದು ಪರಿಗಣಿಸುವುದಿಲ್ಲ. ಪರಿಷ್ಕರಿಸಲು ಸಿದ್ಧ’ ಎಂದು ಪರಿಸರ ಸಚಿವ ಹರ್ಷವರ್ಧನ್‌ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.