ADVERTISEMENT

‌ಚಾಂಡಿ ವಿರುದ್ಧ ಎಫ್‌ಐಆರ್‌ಗೆ ಕೋರ್ಟ್‌ ಆದೇಶ

ಕೇರಳದಲ್ಲಿ ಸೋಲಾರ್ ಹಗಣರದ ಬಿಸಿ; ಚಾಂಡಿ ರಾಜೀನಾಮೆಗೆ ಹೆಚ್ಚಿದ ಒತ್ತಡ

​ಪ್ರಜಾವಾಣಿ ವಾರ್ತೆ
Published 28 ಜನವರಿ 2016, 11:23 IST
Last Updated 28 ಜನವರಿ 2016, 11:23 IST
‌ಚಾಂಡಿ ವಿರುದ್ಧ ಎಫ್‌ಐಆರ್‌ಗೆ ಕೋರ್ಟ್‌ ಆದೇಶ
‌ಚಾಂಡಿ ವಿರುದ್ಧ ಎಫ್‌ಐಆರ್‌ಗೆ ಕೋರ್ಟ್‌ ಆದೇಶ   

‌ತಿರುವನಂತಪುರ (ಪಿಟಿಐ): ಕೇರಳ ರಾಜಕೀಯದಲ್ಲಿ ತೀವ್ರ ಸಂಚಲನ ಉಂಟು ಮಾಡಿರುವ ಸೋಲಾರ್‌ ಫಲಕ ಹಗರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.

ಹಗರಣ ಸಂಬಂಧ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹಾಗೂ ಇಂಧನ ಸಚಿವ ಅರ್ಯಾಡನ್ ಮೊಹಮ್ಮದ್ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಸ್ಥಳೀಯ ನ್ಯಾಯಾಲಯ ಗುರುವಾರ ಆದೇಶಿಸಿದೆ.

ಹಗರಣದ ಪ್ರಮುಖ ಆರೋಪಿ ಸರಿತಾ ನಾಯರ್‌ ಅವರು ಚಾಂಡಿ ಮತ್ತು ಸಚಿವ ಆರ್ಯಾಡನ್‌ ಮೊಹಮ್ಮದ್‌ ಅವರಿಗೆ ಲಂಚ ನೀಡಿರುವುದಾಗಿ ಆರೋಪ ಮಾಡಿದ ಒಂದು ದಿನ ಬಳಿಕ ಈ ಬೆಳವಣಿಗೆ ನಡೆದಿದೆ.

ADVERTISEMENT

ಪಿ.ಡಿ.ಜೋಸೆಫ್‌ ಎಂಬುವವರು ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ಜಾಗೃತ ದಳದ ವಿಶೇಷ ನ್ಯಾಯಾಲಯ  ಈ ಸೂಚನೆ ನೀಡಿದೆ.

ಕೋರ್ಟ್ ಆದೇಶವು ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ಸರ್ಕಾರಕ್ಕೆ ತೀವ್ರ ಮುಜುಗರದ ಜತೆಗೆ ಬಿಸಿ ತುಪ್ಪವಾಗಿದೆ. ಮತ್ತೊಂದಡೆ,  ಇಬ್ಬರು ಕೂಡಲೇ ಪದತ್ಯಾಗ ಮಾಡಬೇಕು ಎಂದು ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಒತ್ತಾಯಿಸಿದೆ.

ಚಾಂಡಿ ಸವಾಲು: ಆದರೆ, ಈ ಸಂಬಂಧ ಪ್ರತಿಕ್ರಿಯಿಸಿದ ಚಾಂಡಿ ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದರು. 'ಸುಳ್ಳು ಆರೋಪಗಳ ಮೂಲಕ ತಮ್ಮನ್ನು ಮುಖ್ಯಮಂತ್ರಿ ಹುದ್ದೆಯಿಂದ ಕಿತ್ತುಹಾಕಲಾಗದು' ಎಂದರು.

ಅಲ್ಲದೇ, 'ಆರೋಪಗಳು ಸಾಬೀತಾದಲ್ಲಿ ಪದತ್ಯಾಗ ಮಾಡುವ ಜತೆಗೆ ಸಾರ್ವಜನಿಕ ಜೀವನದಿಂದ ನಿವೃತ್ತಿ ಹೊಂದುವುದಾಗಿ' ಸವಾಲು ಹಾಕಿದರು.

ರಾಜೀನಾಮೆಗೆ ಎಲ್‌ಡಿಎಫ್‌ ಪಟ್ಟು: ನ್ಯಾಯಾಲಯದ ಆದೇಶದ ಕುರಿತು ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿಯೂ ಆಗಿರುವ ವಿರೋಧ ಪಕ್ಷದ ನಾಯಕ ವಿ.ಎಸ್.ಅಚ್ಯುತಾನಂದನ್, ಅಧಿಕಾರದಲ್ಲಿ ಮುಂದುವರೆಯಲು ಚಾಂಡಿ ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದಿದ್ದಾರೆ.

ಚಾಂಡಿ ಪದತ್ಯಾಗ ಮಾಡದಿದ್ದರೇ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. ಈ ಹಿಂದೆ ಬಾರ್ ಲೈಸೆನ್ಸ್ ಲಂಚ ಪ್ರಕರಣದಲ್ಲಿ ಕೆ.ಎಂ.ಮಣಿ ಹಾಗೂ ಕೆ. ಬಸು ಅವರ ಎದುರಿಸಿದ್ದಂಥ ಪರಿಸ್ಥಿತಿಯೇ ಚಾಂಡಿ ಅವರಿಗೂ ಎದುರಾಗಿದೆ ಎನ್ನುವ ಮೂಲಕ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ಏನಿದು ಪ್ರಕರಣ?: ಪ್ರಕರಣದ ಪ್ರಮುಖ ಆರೋಪಿ ‌ಸರಿತಾ ನಾಯರ್ ಮಾಡಿರುವ ಆರೋಪಗಳ ಕುರಿತು ಜಾಗೃತ ದಳದಿಂದ ತನಿಖೆ ನಡೆಸಬೇಕು ಎಂದು ಖಾಸಗಿ ದೂರು ದಾಖಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.