ADVERTISEMENT

‘ಫ್ರೀಡಂ 251’ ಬುಕಿಂಗ್‌ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2016, 19:40 IST
Last Updated 20 ಫೆಬ್ರುವರಿ 2016, 19:40 IST
‘ಫ್ರೀಡಂ 251’ ಬುಕಿಂಗ್‌ ಸ್ಥಗಿತ
‘ಫ್ರೀಡಂ 251’ ಬುಕಿಂಗ್‌ ಸ್ಥಗಿತ   

ನವದೆಹಲಿ (ಪಿಟಿಐ): ವಿಶ್ವದಲ್ಲಿಯೇ ಅತ್ಯಂತ ಅಗ್ಗದ, ಅಂದರೆ ಕೇವಲ ₹251ಕ್ಕೆ  ಸ್ಮಾರ್ಟ್‌ಫೋನ್‌  (ಫ್ರೀಡಂ 251) ನೀಡುವುದಾಗಿ ಹೇಳಿ ದಿಢೀರನೆ ಪ್ರಸಿದ್ಧಿಗೆ ಬಂದ ರಿಂಗಿಂಗ್‌ ಬೆಲ್ಸ್‌ ಕಂಪೆನಿ ಶನಿವಾರ ಏಕಾಏಕಿ ಬುಕಿಂಗ್(ಮುಂಗಡ ನೋಂದಣಿ) ಸ್ಥಗಿತಗೊಳಿಸಿದೆ.

‘ಗ್ರಾಹಕರಿಂದ ನಿರೀಕ್ಷೆಗೂ ಮೀರಿ  ಬೇಡಿಕೆ ಬರುತ್ತಿದ್ದು, ಅದನ್ನು ಪೂರೈಸುವುದು ಕಷ್ಟವಾದ ಕಾರಣ ಮೊದಲ ಹಂತದ ಬುಕಿಂಗ್‌ ನಿಲ್ಲಿಸಲಾಗಿದೆ. ಶೀಘ್ರ ಎರಡನೇ ಹಂತದ ಬುಕಿಂಗ್‌ ಆರಂಭಿಸಲಾಗುವುದು’ ಎಂದು ಕಂಪೆನಿ ಭರವಸೆ ನೀಡಿದೆ. ಇದಕ್ಕೂ ಮೊದಲು ಆನ್‌ಲೈನ್ ಖರೀದಿಗೆ ಭಾರೀ ಬೇಡಿಕೆ ಬಂದ ಕಾರಣ  ತಾಂತ್ರಿಕ ಅಡಚಣೆಯಿಂದ ಕಂಪೆನಿಯ ವೆಬ್‌ಸೈಟ್‌ ಸ್ಥಗಿತಗೊಂಡಿತ್ತು. ಇದರಿಂದ ಗ್ರಾಹಕರು ಭಾರಿ ನಿರಾಸೆ ಅನುಭವಿಸಬೇಕಾಯಿತು.

ತೆರಿಗೆ ಇಲಾಖೆ ಕಣ್ಣು: ಎದುರಾಳಿ ಕಂಪೆನಿ ಆ್ಯಡ್‌ಕಾಮ್‌ ಹ್ಯಾಂಡ್‌ಸೆಟ್‌ನ್ನು ತನ್ನ ‘ಫ್ರೀಡಂ 251’ ಎಂದು ತೋರಿಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ರಿಂಗಿಂಗ್‌ ಬೆಲ್ಸ್‌ನ ಹಣಕಾಸು ವಹಿವಾಟಿನ ಮೇಲೆ ಇದೀಗ ಸುಂಕ ಮತ್ತು ಆದಾಯ ತೆರಿಗೆ ಇಲಾಖೆ ಕಣ್ಣು ಬಿದ್ದಿದೆ.

ನೊಯಿಡಾ ಮೂಲದ ಕಂಪೆನಿಯ ಹಣಕಾಸು ವಿವರ ಮತ್ತು ಲೆಕ್ಕಪತ್ರ ಇನ್ನಿತರ ದಾಖಲೆಗಳನ್ನು ತೆರಿಗೆ  ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ತೆರಿಗೆ ಅಧಿಕಾರಿಗಳು ಕಂಪೆನಿ ಕಚೇರಿಗೆ ಭೇಟಿ ನೀಡಿದ ವಿಷಯವನ್ನು ರಿಂಗಿಂಗ್‌ ಬೆಲ್ಸ್‌ ಅಧ್ಯಕ್ಷ  ಅಶೋಕ್‌ ಛಡ್ಡಾ  ದೃಢಪಡಿಸಿದ್ದಾರೆ.
‘ಭಾರತದಲ್ಲಿಯೇ  ತಯಾರಿಸಿ’,  ಕೌಶಲ ಭಾರತ, ಸ್ಟಾರ್ಟ್‌ ಅಪ್‌ ಇಂಡಿಯಾ ಯೋಜನೆ ಅಡಿ ಕಾರ್ಯ ನಿರ್ವಹಿಸುತ್ತಿರುವ ಕಂಪೆನಿಗೆ ಅಧಿಕಾರಿ ಗಳು ಮಾರ್ಗಸೂಚಿ ನೀಡಿದ್ದು, ಭವಿಷ್ಯ ದಲ್ಲಿ ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಇಷ್ಟು ಕಡಿಮೆ ಬೆಲೆಗೆ ಹೇಗೆ ಮೊಬೈಲ್‌ ನೀಡಲು ಸಾಧ್ಯ ಎಂದು ಭಾರತೀಯ ಮೊಬೈಲ್ ತಯಾರಕರ ಸಂಘ ಆಕ್ಷೇಪಣೆ ಸಲ್ಲಿಸಿದ ನಂತರ ದೂರಸಂಪರ್ಕ ಸಚಿವಾಲಯ ತನಿಖೆಗೆ ಆದೇಶಿಸಿತ್ತು. ‘ಫ್ರೀಂಡಂ 251’ ಬಿಡುಗ ಡೆಯಿಂದ ಅಗ್ಗದ ಬೆಲೆ ಟ್ಯಾಬ್ಲೆಟ್‌ ಪಿ.ಸಿಗೆ ಪರಿಣಾಮವಾಗುವುದಿಲ್ಲ ಎಂದು ಡಾಟಾವಿಂಡ್‌ ಸಂಸ್ಥೆ ಪ್ರತಿಕ್ರಿಯಿಸಿದೆ.
*
6.17 ಕೋಟಿ ನೋಂದಣಿ

ಮೊದಲ ದಿನ 3.70 ಕೋಟಿ ಹಾಗೂ ಎರಡನೇ ದಿನ 2.47 ಕೋಟಿ ಗ್ರಾಹಕರು ‘ಫ್ರೀಡಂ 251’ ಮೊಬೈಲ್‌ ಖರೀದಿಗೆ ಆನ್‌ಲೈನ್‌ ಮೂಲಕ ಹೆಸರು ನೋಂದಾಯಿಸಿದ್ದಾರೆ. 25 ಲಕ್ಷ ಗ್ರಾಹಕರ ಬುಕಿಂಗ್‌ ಯಶಸ್ವಿಯಾಗಿದೆ ಎಂದು ಕಂಪೆನಿ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.