ನವದೆಹಲಿ(ಪಿಟಿಐ): ಜಗತ್ತು ಎಷ್ಟೇ ಮುಂದುವರಿದಿದ್ದರೂ ಮಹಿಳೆಯ ಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆಯೇನೂ ಆಗಿಲ್ಲ. ಮುಖ್ಯವಾಹಿನಿಯಲ್ಲಿ ಅವಳಿಗೆ ಸ್ಥಾನವಿಲ್ಲ. ಲಿಂಗ ಆಧಾರಿತ ದೌರ್ಜನ್ಯ ಇನ್ನೂ ವ್ಯಾಪಕವಾಗಿದೆ. ಅಲ್ಲದೇ ವರದಕ್ಷಿಣೆ ಮತ್ತು ಮದ್ಯಪಾನದ ಸಮಸ್ಯೆಗಳನ್ನು ಅವರು ನಿರಂತರವಾಗಿ ಎದುರಿಸುತ್ತಿದ್ದಾರೆ.
ಇದು ಯಾವುದೋ ಮಹಿಳಾವಾದಿ ಭಾಷಣದ ಸಾಲುಗಳಲ್ಲ. ಬದಲಿಗೆ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದ ಕುರಿತಾಗಿ ವಿಶ್ವಸಂಸ್ಥೆ, ಆಯೋಗ ಮಹಿಳೆಯರ ಅಭಿಪ್ರಾಯ ಸಂಗ್ರಹಿಸಿ ಬಿಡುಗಡೆ ಮಾಡಿದ ವರದಿ ಹೇಳುತ್ತಿರುವ ವಾಸ್ತವ.
‘ಮಿದುಳು ಮತ್ತು ಹೃದಯ: ಭಾರತೀಯ ಮಹಿಳೆಯ ಮಾತು’ ಎಂಬ ಹೆಸರಿನ ಈ ಸಂಶೋಧನಾ ವರದಿಯನ್ನು ಆಂಧ್ರಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಒಡಿಶಾ ಮತ್ತು ರಾಜಸ್ತಾನಗಳಿಂದ ಆಯ್ದ ಮಹಿಳಾ ಪ್ರತಿನಿಧಿಗಳನ್ನು ಸಂದರ್ಶಿಸಿ ಸಿದ್ಧಪಡಿಸಲಾಗಿದೆ.
‘ವ್ಯಾಪಕವಾಗಿ ಮತ್ತು ನಿರಂತರವಾಗಿ ಮಹಿಳೆ ಲಿಂಗ ಆಧಾರಿತ ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾಳೆ. ಬಾಲ್ಯವಿವಾಹ, ಭ್ರೂಣಹತ್ಯೆಗಳು ಇನ್ನೂ ಸಹಜ ಸಂಗತಿಯಾಗಿಯೇ ಇದೆ. ಕಾನೂನುಗಳ ಮೂಲಕ ಅವುಗಳ ಪ್ರಮಾಣವನ್ನು ಕಡಿಮೆಗೊಳಿಸಲು ಪ್ರಯತ್ನಿಸಿದ್ದರೂ ಕಾನೂನು ಬಾಹಿರವಾಗಿ ಲಿಂಗ ತಾರತಮ್ಯ ಮಾಡಲಾಗುತ್ತಿದೆ’ ಎಂದು ಮಹಿಳೆ ಭಾವಿಸುತ್ತಾಳೆ ಎಂಬ ಸಂಗತಿಯನ್ನು ವರದಿ ಬಹಿರಂಗಪಡಿಸಿದೆ.
ಲಿಂಗ ಸಮಾನತೆಗೆ ಸಂಬಂಧಿಸಿದಂತೆ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರನ್ನು ಇಂದಿಗೂ ತುಚ್ಛಮಟ್ಟದಲ್ಲಿಯೇ ಕಾಣಲಾಗುತ್ತಿದೆ. ಸಾಂಪ್ರದಾಯಿಕ ಕೆಲಸಗಳನ್ನು ಅವರ ಮೇಲೆ ಹೇರಲಾಗುತ್ತದೆ ಎಂದು ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಲಾಗಿದೆ.
ಮಹಿಳೆ ಮುಖ್ಯವಾಹಿನಿಗೆ ಬರದೇ ಇರಲು ಪ್ರಮುಖ ಕಾರಣ ಅನಕ್ಷರತೆ. ಇದರಿಂದ ಅವರು ತಮ್ಮ ಮೂಲಭೂತ ಸೌಕರ್ಯಗಳನ್ನು ದೊರಕಿಸಿಕೊಳ್ಳಲು ಕಷ್ಟವಾಗುತ್ತದೆ. ಔದ್ಯೋಗಿಕ ಅವಕಾಶಗಳೂ ಕಡಿಮೆಯಾಗುತ್ತವೆ. ಇದರಿಂದ ಅವಳು ಆರ್ಥಿಕವಾಗಿಯೂ ಶೋಷಿತಳಾಗುತ್ತಾಳೆ ಎಂದು ಹೇಳಿದೆ.
ಗ್ರಾಮಪಂಚಾಯಿತಿಗಳಂತಹ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಗೆ ಪ್ರಾಧಾನ್ಯ ಇದೆ. ಆದರೆ ಸಂಸತ್ತಿನಲ್ಲಿ ಕೇವಲ ಶೇ 10 ರಷ್ಟು ಮಾತ್ರ ಮಹಿಳೆಯರು ಇದ್ದಾರೆ. ಚುನಾವಣೆಯಂತಹ ನೀತಿ ರೂಪಕ ಮತ್ತು ನಿರ್ಧಾರಕ ಪ್ರಕ್ರಿಯೆಗಳಲ್ಲಿ ಮಹಿಳೆ ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳ್ಳುವಂತಾಗಬೇಕು. ಮುಂಬರುವ ಚುನಾವಣಾ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ್ದಾಗಿದೆ ಎಂದು ಈ ವರದಿ ಸಲಹೆ ಮಾಡಿದೆ.
ಆರೋಗ್ಯ ರಕ್ಷಣೆ: ಆರೋಗ್ಯದ ವಿಷಯಕ್ಕೆ ಬಂದರೆ ಆಯ್ದ ಕೆಲವೇ ಭಾಗಗಳನ್ನು ಹೊರತುಪಡಿಸಿ ಗ್ರಾಮೀಣ ವಿಭಾಗದ ಉಳಿದೆಡೆ ಎಚ್‌ಐವಿ ಮತ್ತು ಏಡ್ಸ್ ಬಗ್ಗೆ ಅರಿವಿನ ಮಟ್ಟ ತುಂಬ ಕಡಿಮೆಯಿದೆ. ಋತುಸ್ರಾವದ ಕಾಲದಲ್ಲಿ ಮತ್ತು ಗರ್ಭಿಣಿಯಾದಾಗ ಅವರು ಮುಖ್ಯವಾಗಿ ನೈರ್ಮಲ್ಯದ ಕೊರತೆ ಮತ್ತು ನೀರಿನ ಸಮಸ್ಯೆಯನ್ನು ಎದುರಿಸುತ್ತಾರೆ. ಅಲ್ಲದೇ ಶೌಚಾಲಯಗಳ ಕೊರತೆಯೂ ಇದೆ ಎಂದು ವರದಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.