ADVERTISEMENT

‘ಸುಪ್ರೀಂ’ಗೆ ರಾಜ್ಯದ ಅರ್ಜಿ

ಹೊಸದಾಗಿ ಗಣಿಗಾರಿಕೆ ಪರವಾನಗಿ ನೀಡಲು ಅನುಮತಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 9:33 IST
Last Updated 3 ಡಿಸೆಂಬರ್ 2013, 9:33 IST

ನವದೆಹಲಿ: ಉಕ್ಕು ಉದ್ಯಮಗಳ ಬೇಡಿಕೆ ಪೂರೈಸಲು ಕಬ್ಬಿಣದ ಅದಿರು ಉತ್ಪಾದನೆಯನ್ನು ವಾರ್ಷಿಕ 3ರಿಂದ 4 ಕೋಟಿ ಟನ್‌ಗೆ ಹೆಚ್ಚಿಸುವ ಉದ್ದೇಶದಿಂದ ಹೊಸದಾಗಿ ಗಣಿಗಾರಿಕೆ ಪರವಾನಗಿ ನೀಡಲು ಅನುಮತಿ ಕೊಡಬೇಕೆಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಉಕ್ಕು ಉದ್ಯಮಗಳಿಗೆ ಅಗತ್ಯವಿರುವ ಹೆಚ್ಚುವರಿ 1 ಕೋಟಿ ಟನ್‌ ಅದಿರು ಗಣಿಗಾರಿಕೆಗೆ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಹೊಸದಾಗಿ ಅನುಮತಿ ಕೊಡಲು ಉದ್ದೇಶಿಸಿದೆ.

ಉಕ್ಕು ಉದ್ಯಮಗಳ ಸದ್ಯದ ಬೇಡಿಕೆ ವಾರ್ಷಿಕ 4 ಕೋಟಿ  ಟನ್‌. ಒಂದೆರಡು ವರ್ಷದ ಬಳಿಕ ಇದು ಇನ್ನೂ ಹೆಚ್ಚಬಹುದು. ಈಗ ‘ಎ’ ಮತ್ತು ‘ಬಿ’ ವರ್ಗದ ಗಣಿಗಳಿಂದ 2.8 ಕೋಟಿ ಟನ್‌ ಅದಿರು ದೊರೆಯುತ್ತದೆ. ಯದ್ವಾತದ್ವ ನಿಯಮ ಉಲ್ಲಂಘಿಸಿದ ಸಿ ವರ್ಗದ ಗಣಿಗಳು ವಿಲೇವಾರಿಯಾಗಿ, ಗಣಿಗಾರಿಕೆ ಆರಂಭಿಸಿದ ಬಳಿಕ 55 ಲಕ್ಷ ಟನ್‌ ಅದಿರು ಸಿಗಬಹುದು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ರಾಜ್ಯ ಸರ್ಕಾರದ ಅರ್ಜಿಯನ್ನು ನ್ಯಾ. ಎ.ಕೆ. ಪಟ್ನಾಯಕ್‌ ನೇತೃತ್ವದ ತ್ರಿಸದಸ್ಯ ಹಸಿರು ಪೀಠ ಡಿಸೆಂಬರ್‌ 9ರಂದು ವಿಚಾರಣೆಗೆ ಎತ್ತಿಕೊಳ್ಳಲಿದೆ. ಸದ್ಯಕ್ಕೆ ತಾತ್ಕಾಲಿಕ ಆಧಾರದಲ್ಲಿ ಎರಡು ವರ್ಷಗಳ ಅವಧಿಗೆ ಅದಿರು ಉತ್ಪಾದನೆ ಹೆಚ್ಚಳಕ್ಕೆ ಅನುಮತಿ ಕೊಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ರಾಜ್ಯ ಸರ್ಕಾರದ ಒಡೆತನದ ಗಣಿ ಸೇರಿದಂತೆ ಎಲ್ಲ ಗಣಿ ಕಂಪೆನಿಗಳ ಪಟ್ಟಿಯನ್ನು ಕೇಂದ್ರ ಉನ್ನತಾಧಿಕಾರ ಸಮಿತಿಗೆ ಕಳುಹಿಸಲಾಗುವುದು.

ತಾತ್ಕಾಲಿಕವಾಗಿ ಅದಿರು ಉತ್ಪಾದನೆ ಹೆಚ್ಚಳಕ್ಕೆ ಒಪ್ಪಿಗೆ ನೀಡಲು ಸಿಇಸಿಗೆ ಅವಕಾಶ ಕೊಡಬಹುದು ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಈಗಿನ ವರ್ಗೀಕರಣದ ಪ್ರಕಾರ 46 ಗಣಿ ಕಂಪೆನಿಗಳು ಎ ಗುಂಪಿನಲ್ಲಿ 62 ಕಂಪೆನಿ ಬಿ ಗುಂಪಿನಲ್ಲಿವೆ. ಇದರಲ್ಲಿ ಮೊದಲ ಗುಂಪಿನಲ್ಲಿ 14 ಮತ್ತು ಎರಡನೇ ಗುಂಪಿನಲ್ಲಿ ಮೂರು ಗಣಿಗಳು ಮಾತ್ರ ಕಾರ್ಯಾರಂಭ ಮಾಡಿವೆ. ಉಳಿದ 91 ಗಣಿಗಳಲ್ಲಿ 85 ಗುತ್ತಿಗೆಗಳನ್ನು ನವೀಕರಿಸಲಾಗಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಸಿ ಗುಂಪಿನ ಗಣಿಗಳಲ್ಲಿ 51 ಗುತ್ತಿಗೆಗಳನ್ನು ರದ್ದು ಮಾಡಲಾಗಿದೆ  ಎಂದು ವಿವರಿಸಿದೆ.

ಮತ್ತೊಂದು ಬೆಳವಣಿಗೆಯಲ್ಲಿ ದೇಶಾದ್ಯಂತ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತು ಎಂ.ಬಿ ಷಾ ಆಯೋಗ ನೀಡಿರುವ ವರದಿಯನ್ನು ಸಲ್ಲಿಸಲು ಕೇಂದ್ರ ಸರ್ಕಾರ ನಿರಾಕರಿಸಿದೆ. ವರದಿ ಸಲ್ಲಿಕೆಯಾದ ಆರು ತಿಂಗಳೊಳಗೆ ಅದನ್ನು ಸಂಸತ್ತಿನಲ್ಲಿ ಮಂಡಿಸಲಾ­ಗುವುದೆಂದು ಕೇಂದ್ರ ಸರ್ಕಾರ ಹಸಿರು ಪೀಠಕ್ಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.