ನವದೆಹಲಿ (ಪಿಟಿಐ): ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಬಿಜೆಪಿ ಪ್ರಧಾನಿ ಅರ್ಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸುವುದನ್ನು ಕಾಂಗ್ರೆಸ್ ಮುಂದುವರಿಸಿದೆ.
‘ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ)ಕ್ಕಿದ್ದ ಅಧಿಕಾರ ಅತ್ಯಲ್ಪವಾಗಿತ್ತು. ಆದ್ದರಿಂದ ಸುಪ್ರೀಂಕೋರ್ಟ್ ಸ್ವತಂತ್ರ ತನಿಖಾ ತಂಡ ರಚಿಸಿ ಗಲಭೆಯ ತನಿಖೆಯನ್ನು ಅದಕ್ಕೆ ವಹಿಸಬೇಕು’ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಕಪೀಲ್ ಸಿಬಲ್ ಶನಿವಾರ ಹೇಳಿದರು.
‘ಭ್ರಷ್ಟಾಚಾರ ಪ್ರಕರಣಗಳನ್ನು ನಿರ್ವಹಿಸಲು ಪ್ರಾಮುಖ್ಯತೆ ನೀಡುವುದರೊಂದಿಗೆ ಮಾನವೀಯತೆ ಜೀವಂತವಾಗಿಡಲು ಸುಪ್ರೀಂಕೋರ್ಟ್ ಸ್ವತಂತ್ರ ತನಿಖಾ ತಂಡ ರಚಿಸಿ ಗುಜರಾತ್ ಗಲಭೆಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಅದಕ್ಕೆ ನೀಡಿ ಮೇಲ್ವಿಚಾರಣೆ ಮಾಡಬೇಕು’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಗಲಭೆ ನಡೆದ ಆರು ವರ್ಷಗಳ ನಂತರ ಎಸ್‌ಐಟಿ ರಚಿಸಲಾಯಿತು. ಈ ತಂಡದಲ್ಲಿದ್ದ ಪೊಲೀಸ್ ಅಧಿಕಾರಿಗಳ ವ್ಯಾಪ್ತಿಯಲ್ಲೇ ಗಲಭೆಗಳು ನಡೆದಿತ್ತು. ಗಲಭೆಯ ಬಗ್ಗೆ ಸಿಬಿಐನಂತೆ ತನಿಖೆ ನಡೆಸುವ ಅಧಿಕಾರ ಎಸ್‌ಐಟಿಗೆ ಇಲ್ಲ. ಅದು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಬಹುದು ಅಷ್ಟೇ’ ಎಂದರು.
ಕಾಂಗ್ರೆಸ್ ನಾಯಕನಾಗಿ ಈ ಹೇಳಿಕೆಗಳನ್ನು ನೀಡುತ್ತಿದ್ದೇನೆಯೇ ಹೊರತು ಸಂಸದನಾಗಿ ಅಥವಾ ದೇಶದ ಕಾನೂನು ಸಚಿವನಾಗಿ ಅಲ್ಲ ಎನ್ನುವುದನ್ನು ಅವರು ಸ್ಪಷ್ಟಪಡಿಸಿದರು.
ಈ ವಿಷಯವನ್ನು ಮೊದಲೇ ಏಕೆ ಹೇಳಿರಲಿಲ್ಲ ಎಂದು ಕೇಳಿದ ಪ್ರಶ್ನೆಗೆ ‘ಗಲಭೆ ಸಂತ್ರಸ್ತರ ಪರವಾಗಿ ನಾನು ನ್ಯಾಯಾಲಯಕ್ಕೆ ಹೋಗಿದ್ದೆ’ ಎಂದು ಉತ್ತರಿಸಿದರು.
‘ದೇಶದಲ್ಲಿ ಮೋದಿ ಪರ ಅಲೆ ಇಲ್ಲ. ಪ್ರಾದೇಶಿಕ ಪ್ರಕ್ಷಗಳೊಂದಿಗೆ ಬಿಜೆಪಿ ಕೈಜೋಡಿಸುತ್ತಿರುವುದು ನೋಡಿದರೆ ಮೋದಿ ಅವರ ವೈಯಕ್ತಿಕ ವರ್ಚಸ್ಸು ಬಿಜೆಪಿಗೆ ಅಗತ್ಯವಿರುವ ಸಂಸದ ಸಂಖ್ಯೆ ತಂದುಕೊಡುತ್ತದೆ ಎನ್ನುವುದನ್ನು ಹೇಳಲಾಗದು’ ಎಂದು ಸಿಬಲ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.