ADVERTISEMENT

ರಾಜಕೀಯದಿಂದ ನಿವೃತ್ತಿ ಇಲ್ಲ: ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 9:11 IST
Last Updated 21 ನವೆಂಬರ್ 2018, 9:11 IST
ಸುಷ್ಮಾ ಸ್ವರಾಜ್ (ಸಂಗ್ರಹ ಚಿತ್ರ)
ಸುಷ್ಮಾ ಸ್ವರಾಜ್ (ಸಂಗ್ರಹ ಚಿತ್ರ)   

ಬೆಂಗಳೂರು:ರಾಜಕೀಯದಿಂದ ನಿವೃತ್ತಿಯಾಗುವುದಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟನೆ ನೀಡಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅವರುಮಧ್ಯಪ್ರದೇಶದಲ್ಲಿ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದರು.

ಬಳಿಕ ರಾಜ್ಯಸಭೆ ಸದಸ್ಯ ಸ್ವಪನ್ ದಾಸ್‌ ಗುಪ್ತಾ ಟ್ವೀಟ್ ಮಾಡಿ, ‘ಆರೋಗ್ಯ ಕಾರಣಗಳಿಗಾಗಿ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತಿದ್ದಾರೆ ಎಂದ ಮಾತ್ರಕ್ಕೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತಾರೆ ಎಂದಲ್ಲ. ಲೋಕಸಭೆಯಲ್ಲಿ ಇಲ್ಲದೇ ಇದ್ದರೂ ಸಾರ್ವಜನಿಕ ಕ್ಷೇತ್ರಕ್ಕೆ ಕೊಡುಗೆ ನೀಡಲು ಉತ್ತಮ ಅವಕಾಶಗಳಿವೆ’ ಎಂದು ಬರೆದಿದ್ದಾರೆ.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿರುವ ಸುಷ್ಮಾ, ‘ನೀವು ಹೇಳಿರುವುದು ನಿಜ. ನಾನು ರಾಜಕೀಯದಿಂದ ನಿವೃತ್ತಿಯಾಗುವುದಿಲ್ಲ.ಆರೋಗ್ಯ ಕಾರಣಗಳಿಗಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ’ ಎಂದು ಬರೆದಿದ್ದಾರೆ.

ಸುಷ್ಮಾ ಸ್ವರಾಜ್‌ ಅವರು ಮಧ್ಯಪ್ರದೇಶದ ವಿದಿಶಾ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅವರು ಘೋಷಿಸಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ, ಸುಷ್ಮಾ ಅವರು ರಾಜಕೀಯದಿಂದಲೇ ನಿವೃತ್ತಿಯಾಗುತ್ತಾರೆ ಎಂಬ ಮಾತುಗಳೂ ಕೇಳಿ ಬಂದಿದ್ದವು. ಆದರೆ, ಬಿಜೆಪಿಯು ಸುಷ್ಮಾ ಸ್ವರಾಜ್‌ ಅವರನ್ನು ರಾಜ್ಯಸಭೆಯ ಮೂಲಕ ಸಂಸತ್‌ಗೆ ಮರಳಿ ಕರೆತರಲಿದೆ ಎಂದು ಪಕ್ಷದ ಮೂಲಗಳು ಹೇಳಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.