ADVERTISEMENT

110 ಯುದ್ಧವಿಮಾನ ಖರೀದಿ

ಹೊಸದಾಗಿ ಟೆಂಡರ್ ‍ಪ್ರಕ್ರಿಯೆ ಆರಂಭಿಸಿದ ಸಚಿವಾಲಯ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 19:30 IST
Last Updated 6 ಏಪ್ರಿಲ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸುಸ್ಥಿತಿಯಲ್ಲಿರುವ ಯುದ್ಧ ವಿಮಾನಗಳ ಕೊರತೆ ಎದುರಿಸುತ್ತಿರುವ ಭಾರತೀಯ ವಾಯುಪಡೆಗೆ ಹೊಸದಾಗಿ 110 ಯುದ್ಧ ವಿಮಾನಗಳನ್ನು ಖರೀದಿಸುವ ಸಲುವಾಗಿ ರಕ್ಷಣಾ ಸಚಿವಾಲಯ ಶುಕ್ರವಾರ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ.

ಜಾಗತಿಕವಾಗಿ ಪ್ರಮುಖವಾಗಿರುವಂತಹ ಫ್ರಾನ್ಸ್‌ನ ಡಸಾಲ್ಟ್, ಅಮೆರಿಕದ ಬೋಯಿಂಗ್, ಯುರೋಪ್‌ನ ಯುರೊಫೈಟರ್‌ ಹಾಗೂ ರಷ್ಯಾದ ಮಿಗ್ ಕಾರ್ಪೊರೇಷನ್ ವಿಮಾನಯಾನ ಸಂಸ್ಥೆಗಳು ಈ ಟೆಂಡರ್‌ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ಈ ಹಿಂದೆ ಯುಪಿಎ ಸರ್ಕಾರ ಘೋಷಿಸಿದ್ದ 126 ಯುದ್ಧ ವಿಮಾನಗಳನ್ನು ಖರೀದಿಸುವ ಮಧ್ಯಮ ಶ್ರೇಣಿಯ ಬಹುಪಯೋಗಿ ಯುದ್ಧ ವಿಮಾನ (ಎಂಎಂಆರ್‌ಸಿಎ) ಟೆಂಡರ್ ಪ್ರಕ್ರಿಯೆಯನ್ನು ಎನ್‌ಡಿಎ ಸರ್ಕಾರ ರದ್ದುಪಡಿಸಿತ್ತು. ಬಳಿಕ 36 ರಫೇಲ್ ಯುದ್ಧವಿಮಾನಗಳನ್ನು ಖರೀದಿಸುವ ಒಪ್ಪಂದ ಘೋಷಿಸಿತ್ತು. ಇದೀಗ ಹೊಸ ಟೆಂಡರ್ ಪ್ರಕ್ರಿಯೆಯು ಎಂಎಂಆರ್‌ಸಿಎ ಖರೀದಿ ಪ್ರಕ್ರಿಯೆಯ ಎರಡನೇ ಹಂತವಾಗಬಹುದು. ಎರಡು ವರ್ಷಗಳ ಹಿಂದೆ ಪ್ರಕ್ರಿಯೆ ರದ್ದುಪಡಿಸಿದ ಬಳಿಕ ಮೊದಲ ಬಾರಿಗೆ ಕರೆದಿರುವ ಟೆಂಡರ್ ಇದಾಗಿದೆ.

ADVERTISEMENT

ಟೆಂಡರ್ ಪ್ರಕ್ರಿಯೆಯಲ್ಲಿ ಮೊದಲ ಹಂತವಾಗಿರುವ ಮಾಹಿತಿ ಕೋರಿಕೆ ಪ್ರಕಟಣೆ (ಆರ್‌ಎಫ್‌ಐ) ಹೊರಡಿಸಲಾಗಿದೆ. ಈ ಆರ್‌ಎಫ್‌ಐ ಪ್ರಕಾರ 110 ವಿಮಾನಗಳಲ್ಲಿ ಶೇ 15ರಷ್ಟನ್ನು (16 ಯುದ್ಧ ವಿಮಾನಗಳು) ಕಂಪನಿಗಳು ತಯಾರಿಸಿ ಕೊಡಲಿವೆ. ಉಳಿದ ವಿಮಾನಗಳನ್ನು ಭಾರತದ ಕಂಪನಿಗಳು ಇಲ್ಲಿಯೇ ತಯಾರಿಸಬೇಕಾಗುತ್ತದೆ.
**
5 ವರ್ಷದಲ್ಲಿ ಪೂರೈಕೆ
ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ, ಮೊದಲ ಹಂತದಲ್ಲಿ ಉತ್ಪಾದಕರು 16 ವಿಮಾನಗಳನ್ನು 3ರಿಂದ 5 ವರ್ಷದ ಒಳಗಾಗಿ ಪೂರೈಸಬೇಕು. 5 ವರ್ಷದೊಳಗೆ ಉಳಿದ ವಿಮಾನಗಳನ್ನು ತಯಾರಿಸಲು ಆರಂಭಿಸಬೇಕು ಹಾಗೂ 12 ವರ್ಷಗಳ ಒಳಗಾಗಿ ಪೂರ್ಣಗೊಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.