ADVERTISEMENT

ಮಹಾರಾಷ್ಟ್ರ: 162 ಶಾಸಕರ ಆತ್ಮವಿಶ್ವಾಸವಿದ್ರೂ ಮುಕ್ತ ಮತದಾನಕ್ಕೆ ಆಗ್ರಹವೇಕೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ನವೆಂಬರ್ 2019, 13:37 IST
Last Updated 26 ನವೆಂಬರ್ 2019, 13:37 IST
ಮುಂಬಯಿಯಲ್ಲಿ ಸೋಮವಾರ 'ನಾವು 162' ಮಂದಿ ಜತೆಗಿದ್ದೇವೆ ಎಂದು ಬಲ ಪ್ರದರ್ಶಿಸಿದ ಕಾಂಗ್ರೆಸ್, ಶಿವಸೇನಾ, ಎನ್‌ಸಿಪಿ
ಮುಂಬಯಿಯಲ್ಲಿ ಸೋಮವಾರ 'ನಾವು 162' ಮಂದಿ ಜತೆಗಿದ್ದೇವೆ ಎಂದು ಬಲ ಪ್ರದರ್ಶಿಸಿದ ಕಾಂಗ್ರೆಸ್, ಶಿವಸೇನಾ, ಎನ್‌ಸಿಪಿ   

ನವದೆಹಲಿ: ಮಹಾರಾಷ್ಟ್ರದ ರಾಜಕೀಯ ಕ್ಷಣಕ್ಕೊಂದು ತಿರುವು ಪಡೆಯುತ್ತಿರುವಂತೆಯೇ, ಬಿಜೆಪಿಯ ದೇವೇಂದ್ರ ಫಡಣವೀಸ್ ನೇತೃತ್ವದ ಸರಕಾರವು ನ.27ರಂದು ಸಂಜೆಯೊಳಗೆ ಬಹುಮತ ಸಾಬೀತುಪಡಿಸಬೇಕೆಂದುಸುಪ್ರೀಂ ಕೋರ್ಟು ಮಂಗಳವಾರ ನಿರ್ದೇಶನ ನೀಡಿದೆ. ಇಲ್ಲಿ ಪ್ರಮುಖವಾದ ಅಂಶವೆಂದರೆ, ವಾದದ ಸಂದರ್ಭದಲ್ಲಿ ಮುಕ್ತ ಮತದಾನ ನಡೆಯಬೇಕು ಮತ್ತು ಮಹಾರಾಷ್ಟ್ರ ವಿಧಾನಸಭೆ ಕಲಾಪದ ನೇರ ಪ್ರಸಾರವೂ ಆಗಬೇಕು ಎಂದು ಕಾಂಗ್ರೆಸ್, ಎನ್‌ಸಿಪಿ ಹಾಗೂ ಶಿವಸೇನಾಗಳ ಕೂಟ 'ಮಹಾ ವಿಕಾಸ್ ಅಘಾಡಿ' ಆಗ್ರಹಿಸಿದೆ.

ಸೋಮವಾರ 'ನಾವು 162' ಮಂದಿ ಜತೆಯಾಗಿದ್ದೇವೆ ಎಂದು ಮೂರೂ ಪಕ್ಷಗಳು ಬಲ ಪ್ರದರ್ಶನವನ್ನು ನಡೆಸಿದ್ದವು. ಇದರಲ್ಲಿ ಎಷ್ಟು ಮಂದಿ ಶಾಸಕರಿದ್ದರು ಮತ್ತು ಇದ್ದವರೆಲ್ಲರೂ ಶಾಸಕರೇ ಅಥವಾ ಪಕ್ಷಗಳ ಪದಾಧಿಕಾರಿಗಳೂ ಇದ್ದರೇ ಎಂಬ ಮಾಹಿತಿಯಿನ್ನೂ ಸ್ಪಷ್ಟವಾಗಿಲ್ಲ. ಬಹುಮತಕ್ಕೆ ಬೇಕಾಗಿರುವುದು 145 ಸದಸ್ಯಬಲ. 162 ಮಂದಿ ಶಾಸಕರು ನಾವು ಜತೆಯಾಗಿದ್ದೇವೆ ಎಂದು ಘಂಟಾಘೋಷವಾಗಿ ಸಾರಿದರೂ, ಮುಕ್ತ ಮತದಾನ ವ್ಯವಸ್ಥೆಯಾಗಬೇಕು ಎಂದು ಈ ಮೂರು ಪಕ್ಷಗಳ ಪರ ವಾದಿಸಿದ ಹಿರಿಯ ಕಾಂಗ್ರೆಸ್ ಮುಖಂಡ, ವಕೀಲ ಅಭಿಷೇಕ್ ಮನು ಸಿಂಘ್ವಿ ಆಗ್ರಹಿಸಿದ್ದರು.

ADVERTISEMENT

ಧ್ವನಿ ಮತದಲ್ಲಿ ಎಲ್ಲ ಶಾಸಕರು ಧ್ವನಿಯ ಮೂಲಕ ತಮ್ಮ ಪ್ರತಿಕ್ರಿಯೆ ನೀಡುತ್ತಾರೆ. ಮತ ವಿಭಜನೆಗೆ ಒತ್ತಾಯಿಸಿದರೆ ತಲೆ ಎಣಿಕೆ ನಡೆಸಲಾಗುತ್ತದೆ.

ಶಾಸಕರು ಸದನದ ಬಲಾಬಲ ಪರೀಕ್ಷೆಯ ಕಲಾಪಕ್ಕೆ ಗೈರು ಹಾಜರಾಗುವ ಮೂಲಕವೂ ಯಾವುದಾದರೊಂದು ಪಕ್ಷಕ್ಕೆ ಅನುಕೂಲ ಮಾಡಿಕೊಡಬಹುದಾಗಿದೆ. ಅಂಥ ಸಂದರ್ಭದಲ್ಲಿ, ಹಾಜರಿದ್ದವರು ಮತ್ತು ಚಲಾವಣೆಯಾದ ಮತಗಳ ಆಧಾರದಲ್ಲಿ ಬಹುಮತ ನಿರ್ಧರಿಸಲಾಗುವುದರಿಂದ, ಬಹುಮತಕ್ಕೆ ಬೇಕಾದ ಮ್ಯಾಜಿಕ್ ಸಂಖ್ಯೆಯು ಕಡಿಮೆಯಾಗುವ ಸಾಧ್ಯತೆಯೂ ಇರುತ್ತದೆ.

ರಾಜಕೀಯದಲ್ಲಿ ಯಾವುದೇ ಕ್ಷಣ ಏನೇ ನಡೆಯಬಹುದಾಗಿರುವುದರಿಂದ, ಮಹಾರಾಷ್ಟ್ರ ಸದನದ ಬಲಾಬಲ ಪರೀಕ್ಷೆ ಕುತೂಹಲಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.