ADVERTISEMENT

ವಾರಾಣಸಿ: ಬಿಜೆಪಿ ಮುಖಂಡನ ಕೊಲೆ– 16 ಮಂದಿಗೆ ಜೀವಾವಧಿ ಶಿಕ್ಷೆ

ಪಿಟಿಐ
Published 13 ಜೂನ್ 2025, 16:37 IST
Last Updated 13 ಜೂನ್ 2025, 16:37 IST
-
-   

ವಾರಾಣಸಿ: ನಗರದ ಬಿಜೆಪಿ ಮುಖಂಡ ಪಶುಪತಿನಾಥ ಸಿಂಗ್ ಅವರ ಕೊಲೆ ಪ್ರಕರಣದಲ್ಲಿ 16 ಮಂದಿ ಅಪರಾಧಿಗಳಿಗೆ ಇಲ್ಲಿನ ತ್ವರಿತಗತಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಶುಕ್ರವಾರ ಆದೇಶಿಸಿದೆ.

‘ತ್ವರಿತಗತಿ ನ್ಯಾಯಾಲಯ ನ್ಯಾಯಮೂರ್ತಿ ಕುಲದೀಪ್‌ ಸಿಂಗ್ ಅವರು 16 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಪ್ರಕರಣದ ಇತರ ಇಬ್ಬರು ಆರೋಪಿಗಳ ವಿರುದ್ಧದ ವಿಚಾರಣೆ ಇನ್ನೂ ನಡೆಯುತ್ತಿದೆ’ ಎಂದು ಪಶುಪತಿನಾಥ ಸಿಂಗ್‌ ಪರ ವಕೀಲ ಪ್ರೇಮಪ್ರಕಾಶ್ ಗೌತಮ್‌ ತಿಳಿಸಿದ್ದಾರೆ.

2022ರ ಅಕ್ಟೋಬರ್ 12ರಂದು ಸಿಂಗ್‌ ಅವರ ಕೊಲೆಯಾಗಿತ್ತು.

ADVERTISEMENT

ಘಟನೆ: ತಮ್ಮ ಮನೆ ಸಮೀಪದ ಮದ್ಯದ ಅಂಗಡಿ ಮುಂದಿನ ಬಯಲಿನಲ್ಲಿ ಯುವಕರು ಮದ್ಯ ಸೇವನೆ ಮಾಡುತ್ತಿದ್ದುದನ್ನು ಪಶುಪತಿನಾಥ ಸಿಂಗ್‌ ಆಕ್ಷೇಪಿಸಿದ್ದರು. ಮದ್ಯ ಸೇವನೆ ತ್ಯಜಿಸುವಂತೆಯೂ ಅವರು ಬುದ್ಧಿಮಾತು ಹೇಳಿದ್ದರು.

‘ಆಗ, ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಕೆಲ ಹೊತ್ತಿನ ನಂತರ 30–40 ಜನರಿದ್ದ ಗುಂಪು ಪಶುಪತಿನಾಥ ಸಿಂಗ್‌ ಅವರ ಮೇಲೆ ಬಡಿಗೆ, ಕಬ್ಭಿಣದ ಸರಳುಗಳಿಂದ ಹಲ್ಲೆ ನಡೆಸಿತ್ತು. ತಂದೆಯ ರಕ್ಷಣೆಗೆ ಧಾವಿಸಿದ್ದ ಪುತ್ರ ರಾಜನ್‌ ಸಿಂಗ್‌ ಮೇಲೂ ಗುಂಪು ಹಲ್ಲೆ ನಡೆಸಿತ್ತು’ ಎಂದು ವಕೀಲ ಗೌತಮ್‌ ತಿಳಿಸಿದ್ದಾರೆ.

‘ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಶುಪತಿನಾಥ ಸಿಂಗ್‌ ಅವರು ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದರು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.