ADVERTISEMENT

18 ಗಂಟೆ ಪ್ರಯಾಣದ ನಂತರ ಲಾತೂರ್‌ ತಲುಪಿದ ‘ಜಲ ರೈಲು’

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2016, 7:04 IST
Last Updated 12 ಏಪ್ರಿಲ್ 2016, 7:04 IST
18 ಗಂಟೆ ಪ್ರಯಾಣದ ನಂತರ  ಲಾತೂರ್‌  ತಲುಪಿದ ‘ಜಲ ರೈಲು’
18 ಗಂಟೆ ಪ್ರಯಾಣದ ನಂತರ ಲಾತೂರ್‌ ತಲುಪಿದ ‘ಜಲ ರೈಲು’   

ಮುಂಬೈ (ಪಿಟಿಐ): ಬರಗಾಲದಿಂದ ತೀವ್ರ ಸಂಕಷ್ಟಕ್ಕೆ ತುತ್ತಾಗಿರುವ ಪೂರ್ವ ಮಹಾರಾಷ್ಟ್ರದಲ್ಲಿನ ಮರಾಠಾವಾಡದ ಲಾತೂರ್‌ ಪ್ರದೇಶಕ್ಕೆ ನೀರು ಪೂರೈಸಲು ಸಾಂಗ್ಲಿ ಸಮೀಪದ ಮೀರಜ್‌ ನಿಲ್ದಾಣದಿಂದ ಹೊರಟಿದ್ದ ವಿಶೇಷ ‘ಜಲ ರೈಲು’ 18 ಗಂಟೆಗಳ ಪ್ರಯಾಣದ ನಂತರ ಮಂಗಳವಾರ ಬೆಳಿಗ್ಗೆ ಗಮ್ಯ ಸ್ಥಾನ ತಲುಪಿದೆ.

ಈ ಜಲ ರೈಲಿನ 10 ಬೋಗಿಗಳಲ್ಲಿ  ಒಟ್ಟು 5 ಲಕ್ಷ ಲೀಟರ್‌ ನೀರು ಸಾಗಿಸಲಾಗಿದೆ. ಪ್ರತಿ ಬೋಗಿಯಲ್ಲಿಯೂ  ತಲಾ 50 ಸಾವಿರ ಲೀಟರ್‌ ನೀರು ಹಿಡಿಸುತ್ತದೆ.  350 ಕಿ.ಮೀ ಪ್ರಯಾಣದ ನಂತರ ರೈಲು ಸೋಮವಾರ ಬೆಳಿಗ್ಗೆ 5 ಗಂಟೆಗೆ ಲಾತೂರ್‌ ರೈಲು ನಿಲ್ದಾಣ ತಲುಪಿದೆ ಎಂದು ಕೇಂದ್ರ ರೈಲ್ವೆಯ ವಕ್ತಾರ ನರೇಂದ್ರ ಪಾಟೀಲ್‌ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ನೀರು ಪೂರೈಕೆಗೆಂದೇ ಇರುವ 10 ಬೋಗಿಯ ಈ ರೈಲು ರಾಜಸ್ತಾನದ ಕೋಟಾದಿಂದ ಮೀರಜ್‌ಗೆ ಭಾನುವಾರ ಬಂದಿತ್ತು.

ಏಪ್ರಿಲ್‌ 15ರಂದು 50 ಬೋಗಿಗಳ ಮತ್ತೊಂದು ರೈಲು ನೀರು ಪೂರೈಸಲಿದೆ. ಒಂದು ಬೋಗಿಯಲ್ಲಿ 54 ಸಾವಿರ ಲೀಟರ್‌ ನೀರು ಸಾಗಿಸಬಹುದು ಎಂದು ಪಾಟೀಲ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.