ADVERTISEMENT

ಭವಿಷ್ಯವು ಯುದ್ಧದಲ್ಲಿ ಅಲ್ಲ, ಬುದ್ಧನಲ್ಲಿದೆ: ಪ್ರಧಾನಿ ನರೇಂದ್ರ ಮೋದಿ

ಪಿಟಿಐ
Published 9 ಜನವರಿ 2025, 9:22 IST
Last Updated 9 ಜನವರಿ 2025, 9:22 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ </p></div>

ಪ್ರಧಾನಿ ನರೇಂದ್ರ ಮೋದಿ

   

ಪಿಟಿಐ ಚಿತ್ರ

ಭುವನೇಶ್ವರ: ಭವಿಷ್ಯ ‘ಯುದ್ಧ’ದಲ್ಲಿ ಅಲ್ಲ, ‘ಬುದ್ಧ’ನಲ್ಲಿ ಇದೆ ಎಂದು ಸಾರುವ ಪರಂಪರೆಯನ್ನು ಭಾರತ ಹೊಂದಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಜಗತ್ತು ಇಂದು ಭಾರತದ ಮಾತನ್ನು ಆಲಿಸುತ್ತಿದೆ’ ಎಂದು ಪ್ರತಿಪಾದಿಸಿದರು.

ADVERTISEMENT

ಭುವನೇಶ್ವರದಲ್ಲಿ ಗುರುವಾರ ನಡೆದ 18ನೇ ಪ್ರವಾಸಿ ಭಾರತೀಯ ದಿವಸ್‌ ಸಮಾವೇಶದಲ್ಲಿ ವಲಸಿಗ ಸಮುದಾಯದವರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಭಾರತವು ಪ್ರಜಾಪ್ರಭುತ್ವದ ತಾಯಿಯಷ್ಟೇ ಅಲ್ಲ, ಪ್ರಜಾಪ್ರಭುತ್ವ ಇಲ್ಲಿನ ಜನರ ಜೀವನದ ಭಾಗವೂ ಆಗಿದೆ’ ಎಂದರು.

‘ವಿಶ್ವವೇ ಇಂದು ಭಾರತದ ಮಾತುಗಳನ್ನು ಕೇಳಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಭಾರತವು ತನ್ನ ಅಭಿಪ್ರಾಯಗಳ ಜತೆಗೆ ಜಾಗತಿಕವಾಗಿ ದಕ್ಷಿಣ ದೇಶಗಳ ಅಭಿಪ್ರಾಯವನ್ನು ಬಲವಾಗಿ ಪ್ರಸ್ತುತಪಡಿಸುತ್ತಿದೆ’ ಎಂದು ಹೇಳಿದರು.

‘ಜಗತ್ತಿನಲ್ಲಿ ಖಡ್ಗದ ಬಲದಿಂದ ಸಾಮ್ರಾಜ್ಯಗಳು ವಿಸ್ತರಣೆ ಆಗುತ್ತಿದ್ದ ಸಂದರ್ಭದಲ್ಲಿ ಅಶೋಕ ಚಕ್ರವರ್ತಿ ಶಾಂತಿಯ ಮಾರ್ಗವನ್ನು ಆಯ್ಕೆ ಮಾಡಿಕೊಂಡ. ಇದು ಭಾರತದ ಪರಂಪರೆಯ ಶಕ್ತಿಯಾಗಿದೆ’ ಎಂದು ಅವರು ಬಣ್ಣಿಸಿದರು. ಈ ಪರಂಪರೆಯಿಂದಾಗಿ ಭಾರತವು ಜಗತ್ತಿಗೆ ಶಾಂತಿಯ ಬಗ್ಗೆ ಹೇಳಲು ಸಾಧ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಅನ್ಯ ದೇಶಗಳಲ್ಲಿ ನೆಲೆಸಿರುವ ಭಾರತೀಯರನ್ನು ದೇಶದ ರಾಯಭಾರಿಗಳೆಂದು ಸದಾ ಪರಿಗಣಿಸುವುದಾಗಿ ಮೋದಿ ಇದೇ ವೇಳೆ ತಿಳಿಸಿದರು.

‘ನಮ್ಮ ಜೀವನವೇ ವೈವಿಧ್ಯದಿಂದ ಕೂಡಿದೆ. ಹೀಗಾಗಿ ನಾವು ಎಲ್ಲೇ ಹೋದರು ಅಲ್ಲಿನ ಸಮುದಾಯದವರ ಜತೆ ಬೆರೆಯುತ್ತೇವೆ. ಅಲ್ಲಿನ ಕಾನೂನು, ನಿಯಮ ಮತ್ತು ಸಂಪ್ರದಾಯಗಳನ್ನು
ಗೌರವಿಸಿ ಪಾಲಿಸುತ್ತೇವೆ. ಇದೇ ವೇಳೆ ನಮ್ಮ ಹೃದಯವೂ ಭಾರತಕ್ಕಾಗಿ ತುಡಿಯುತ್ತಿರುತ್ತದೆ’ ಎಂದು ಅವರು ಹೇಳಿದರು.

2047ಕ್ಕೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸಲು ವಲಸಿಗರು ಮಹತ್ವದ ಪಾತ್ರವಹಿಸಬೇಕು ಎಂದು ಅವರು ಕರೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.