ADVERTISEMENT

ರಾಹುಲ್ ಗಾಂಧಿ ಕಚೇರಿ ಧ್ವಂಸ: 19 ಎಸ್‌ಎಫ್‌ಐ ಕಾರ್ಯಕರ್ತರ ಬಂಧನ

ಪಿಟಿಐ
Published 25 ಜೂನ್ 2022, 13:48 IST
Last Updated 25 ಜೂನ್ 2022, 13:48 IST
   

ವಯನಾಡ್‌: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕಚೇರಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಆಡಳಿತಾರೂಢ ಸಿಪಿಎಂನ ವಿದ್ಯಾರ್ಥಿ ಸಂಘಟನೆಯಾದ ಎಸ್‌ಎಫ್‌ಐನ 19 ಮಂದಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಿರೋಧ ಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್, ಕೇಂದ್ರದ ನರೇಂದ್ರ ಮೋದಿ ಸರ್ಕಾರವನ್ನು ಮೆಚ್ಚಿಸಲು ಸಂಘ ಪರಿವಾರದ ಕಾರ್ಯಸೂಚಿಯ ಭಾಗವಾಗಿ ಪಕ್ಷದ ವಿದ್ಯಾರ್ಥಿ ಘಟಕದ ಕಾರ್ಯಕರ್ತರು ಸಂಸದರ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದೆ.

ಹಿಂಸಾಚಾರದಲ್ಲಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರ ಕಚೇರಿ ಸಿಬ್ಬಂದಿ ಅವಿಶಿತ್ ಎಂಬುವರು ಭಾಗಿಯಾಗಿದ್ದರು ಎಂದು ಆರೋಪಿಸಿದೆ. ಆದರೆ, ಆರೋಪ ತಿರಸ್ಕರಿಸಿದ ಸಚಿವೆ, ವೈಯಕ್ತಿಕ ಕಾರಣಗಳಿಂದ ತಿಂಗಳ ಆರಂಭದಲ್ಲಿ ಆತನನ್ನು ಕಚೇರಿಯಿಂದ ಬಿಡುಗಡೆ ಮಾಡಲಾಗಿತ್ತು ಎಂದು ಸ್ಪಷ್ಪಪಡಿಸಿದ್ದಾರೆ.

ADVERTISEMENT

ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ವಯನಾಡ್ ಸಂಸದರು ಬರೆದಿರುವ ಪತ್ರಕ್ಕೆ ಉತ್ತರಿಸಿರುವ ಮುಖ್ಯಮಂತ್ರಿ, ಸಂಸತ್ತಿನ ಮುಂಬರುವ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸುವಂತೆ ಗಾಂಧಿ ಅವರಿಗೆ ಮನವಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ.

’ಘಟನೆ ಸಂಬಂಧ ಈವರೆಗೆ 19 ಜನರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇನ್ನೂ ಕೆಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮತ್ತಷ್ಟು ಜನರ ಬಂಧನ ಸಾಧ್ಯತೆ ಇದೆ. ಪ್ರಸ್ತುತ ಮಾನಂತವಾಡಿ ಡಿವೈಎಸ್‌ಪಿ ಪ್ರಕರಣದ ತನಿಖೆ ನಡೆಸುತ್ತಿದ್ದು, ಸದ್ಯದಲ್ಲೇಎಡಿಜಿಪಿ ನೇತೃತ್ವದ ವಿಶೇಷ ತನಿಖಾ ತಂಡಕ್ಕೆ ಪ್ರಕರಣ ಹಸ್ತಾಂತರಿಸಲಾಗುವುದು‘ ಎಂದು ಪೊಲೀಸರುತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.