ADVERTISEMENT

2ಜಿ: ಚಿದು ವಿಚಾರಣೆ ಕೋರಿಕೆ ಸ್ವಾಮಿ ಅರ್ಜಿ: ತೀರ್ಪು ಫೆ.4ಕ್ಕೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2012, 19:30 IST
Last Updated 20 ಜನವರಿ 2012, 19:30 IST
2ಜಿ: ಚಿದು ವಿಚಾರಣೆ ಕೋರಿಕೆ ಸ್ವಾಮಿ ಅರ್ಜಿ: ತೀರ್ಪು ಫೆ.4ಕ್ಕೆ
2ಜಿ: ಚಿದು ವಿಚಾರಣೆ ಕೋರಿಕೆ ಸ್ವಾಮಿ ಅರ್ಜಿ: ತೀರ್ಪು ಫೆ.4ಕ್ಕೆ   

ನವದೆಹಲಿ (ಐಎಎನ್ ಎಸ್): 2ಜಿ ತರಂಗಾಂತರ ಪ್ರಕರಣದಲ್ಲಿ ಗೃಹ ಸಚಿವ ಪಿ. ಚಿದಂಬರಂ ಅವರನ್ನು ವಿಚಾರಣೆಗೆ ಗುರಿ ಪಡಿಸಬೇಕು ಎಂಬುದಾಗಿ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿರುವ ಮನವಿಗೆ ಸಂಬಂಧಿಸಿದ ತನ್ನ ಆದೇಶವನ್ನು ವಿಶೇಷ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯವು ಶನಿವಾರ ಫೆಬ್ರುವರಿ 4ಕ್ಕೆ ಕಾಯ್ದಿರಿಸಿತು.

~ಮನವಿ ಕುರಿತ ಆದೇಶವನ್ನು ಫೆಬ್ರುವರಿ 4ಕ್ಕೆ ಕಾಯ್ದಿರಿಸಲಾಗಿದೆ~ ಎಂದು ವಿಶೇಷ ಸಿಬಿಐ ನ್ಯಾಯಾಧೀಶ ಓ.ಪಿ. ಸೈನಿ ಹೇಳಿದರು.

~ಈ ಸಾಕ್ಷ್ಯಾಧಾರವು ಲೈಸೆನ್ಸ್ ಪಡೆದ ಕಂಪೆನಿಗಳಿಗೆ ತರಂಗಾಂತರ ಪರವಾನಗಿ ಮೇಲಿನ ದರ ನಿಗದಿ ಪಡಿಸುವ ಕುರಿತು ನಿರ್ಧಾರ ತೆಗೆದುಕೊಳ್ಳುವಲ್ಲಿ ಆಗಿನ ದೂರಸಂಪರ್ಕ ಸಚಿವ ಎ. ರಾಜಾ ಅವರ ಜೊತೆಗೆ ಆಗಿನ ಹಣಕಾಸು ಸಚಿವ ಚಿದಂಬರಂ ಅವರೂ ಶಾಮೀಲಾಗಿದ್ದುದಲ್ಲದೆ ಸಮ್ಮತಿಯನ್ನೂ ನೀಡಿದ್ದರು ಎಂಬುದನ್ನು ಬಹಿರಂಗ ಪಡಿಸುತ್ತದೆ~ ಎಂದು ಸ್ವಾಮಿ ನ್ಯಾಯಾಲಯಕ್ಕೆ ತಿಳಿಸಿದ್ದರು.

ದೂರಸಂಪರ್ಕ ಪರವಾನಗಿ ಪಡೆದ ಎರಡು ಕಂಪೆನಿಗಳು ತಮ್ಮ ಷೇರುಗಳನ್ನು ತಮ್ಮ ಸೇವೆ ಆರಂಭ ಮಾಡುವುದಕ್ಕೂ ಮೊದಲೇ ಬೇರೆಯವರಿಗೆ ಮಾರಾಟ ಮಾಡಿದ್ದರು ಎಂದೂ ಸ್ವಾಮಿ ಹೇಳಿದ್ದರು.

ಸಾಕ್ಷ್ಯಾಧಾರವು ಭ್ರಷ್ಟಾಚಾರ ನಿಗ್ರಹ ಕಾಯ್ದೆಯ  ಅಡಿಯಲ್ಲಿ ಅಪರಾಧ ಎಸಗಿರುವುದನ್ನು ದಾಖಲಿಸಿದೆ ಎಂದೂ ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು.

ತರಂಗಾಂತರ ಯುಗ ಆರಂಭವಾದಾಗ ಮೊದಲ ಯುಪಿಎ ಸರ್ಕಾರದಲ್ಲಿ ಚಿದಂಬರಂ ಹಣಕಾಸು ಸಚಿವರಾಗಿದ್ದರು.

ತರಂಗಾಂತರ ದರನಿಗದಿಗೆ ಸಂಬಂಧಿಸಿದಂತೆ 2008ರಲ್ಲಿ ಚಿದಂಬರಂ ಮತ್ತು ಎ. ರಾಜಾ ಅವರು ಜಂಟಿಯಾಗಿಯೇ ನಿರ್ಧಾರ ಕೈಗೊಂಡಿರುವುದರಿಂದ ಚಿದಂಬರಂ ಅವರನ್ನು ಪ್ರಕರಣದಲ್ಲಿ ವಿಚಾರಣೆಗೆ ಗುರಿ ಪಡಿಸಬೇಕು ಎಂದು ಸ್ವಾಮಿ ನ್ಯಾಯಾಲಯವನ್ನು ಕೋರಿದ್ದರು.

ಎ. ರಾಜಾ ಅವರು ಪ್ರಕರಣ ಸಂಬಂಧ ಬಂಧಿತರಾಗಿ 2011ರ ಫೆಬ್ರುವರಿ 2ರಿಂದ ತಿಹಾರ್ ಸೆರೆಮನೆಯಲ್ಲಿ ಇದ್ದಾರೆ. 2001ರ ದರಗಳನ್ನು ಆಧರಿಸಿ ತರಂಗಾಂತರ ದರ ನಿಗದಿ ಪಡಿಸುವಂತೆ ಶಿಫಾರಸು ಮಾಡುವಲ್ಲಿ ಚಿದಂಬರಂ ಮತ್ತು ರಾಜಾ ಸಮಾನ ಅಪರಾಧಿಗಳು ಎಂಬುದಾಗಿ ಸ್ವಾಮಿ ಆಪಾದಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.