ADVERTISEMENT

2ಜಿ ತರಂಗಾಂತರ ಹರಾಜು ಪ್ರಕ್ರಿಯೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): 2ಜಿ ತರಂಗಾಂತರಗಳನ್ನು ಹರಾಜು ಮೂಲಕ ಮಾರಾಟ ಮಾಡಲು ಸುಪ್ರೀಂಕೋರ್ಟ್ ಗುರುವಾರ ಆದೇಶಿಸಿದ ಬೆನ್ನಲ್ಲೇ ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರ (ಟ್ರಾಯ್) ಶುಕ್ರವಾರ ಆ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಈ ಕುರಿತು ಸಂಬಂಧಪಟ್ಟ ಎಲ್ಲರ ಅಭಿಪ್ರಾಯ ಕೋರಿ ಪೂರ್ವ ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡಿರುವ ಟ್ರಾಯ್, ಫೆ.15ರೊಳಗೆ  ಆಕ್ಷೇಪ ಹಾಗೂ ಸಲಹೆಗಳನ್ನು ತಿಳಿಸಲು ಕೋರಿದೆ.

ಕೋರ್ಟ್ ಸಮಯದ ಗಡುವು ವಿಧಿಸಿರುವುದರಿಂದ ಈಗ ನೀಡಿರುವ ಕಾಲಾವಕಾಶದಲ್ಲಿ ಯಾವುದೇ ವಿಸ್ತರಣೆ ಮಾಡುವುದಿಲ್ಲ ಎಂದು ಟ್ರಾಯ್ ಪ್ರಧಾನ ಸಲಹೆಗಾರ ಸುಧೀರ್ ಗುಪ್ತ ಸ್ಪಷ್ಟಪಡಿಸಿದ್ದಾರೆ.

ADVERTISEMENT

`ಕೇಂದ್ರ ಸರ್ಕಾರ 2011ರಲ್ಲಿ ಕೈಗೊಂಡ ನಿರ್ಧಾರ ಗಮನದಲ್ಲಿರಿಸಿಕೊಂಡು 22 ಸೇವಾ ಪ್ರದೇಶಗಳಲ್ಲಿ 2ಜಿ ತರಂಗಾಂತರಗಳ ಪರವಾನಗಿ ನೀಡಿಕೆ ಹಾಗೂ ಮಂಜೂರಾತಿ ಸಂಬಂಧ ಹೊಸ ಶಿಫಾರಸುಗಳನ್ನು ಮಾಡಲಾಗುವುದು. 3ಜಿ ತರಂಗಾಂತರ ಮಂಜೂರಾತಿಗೆ ಅನುಸರಿಸಿದ ಕ್ರಮವನ್ನೇ ಈ ಪ್ರಕ್ರಿಯೆಯಲ್ಲೂ ಅಳವಡಿಸಿಕೊಳ್ಳಲಾಗುವುದು~ ಎಂದು ಗುಪ್ತ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹೊಸದಾಗಿ 2ಜಿ ತರಂಗಾಂತರ ಲೈಸೆನ್ಸ್‌ಗಳನ್ನು ನೀಡುವಲ್ಲಿ ಟ್ರಾಯ್‌ನ ಶಿಫಾರಸುಗಳನ್ನು ಪರಿಗಣಿಸಬೇಕೆಂದು  ಹಾಗೂ ಅವನ್ನು ಗರಿಷ್ಠ ನಾಲ್ಕು ತಿಂಗಳ ಅವಧಿಯೊಳಗೆ ಅನುಷ್ಠಾನಗೊಳಿಸಬೇಕು ಎಂದು ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿತ್ತು.

ಸುಪ್ರೀಂಕೋರ್ಟ್ ಪರವಾನಗಿ ರದ್ದು ಮಾಡಿದ್ದರಿಂದ 536 ಮೆಗಾಹರ್ಟ್ಸ್ ತರಂಗಗಳು ಇದೀಗ ಹರಾಜಿಗೆ ಲಭ್ಯವಾಗಲಿವೆ.

2ಜಿ ತರಂಗಾಂತರದ 6.2 ಮೆಗಾಹರ್ಟ್ಸ್ ಮಂಜೂರಾತಿಗೆ ರೂ 10,972.45 ಕೋಟಿ ದರ ನಿಗದಿ ಮಾಡುವಂತೆ ಟ್ರಾಯ್ ಒಂದು ವರ್ಷದ ಹಿಂದೆ ಶಿಫಾರಸು ಮಾಡಿತ್ತು. ಇದು, 2008ರ ಜನವರಿಯಲ್ಲಿ ಪರವಾನಗಿ ನೀಡಲು ನಿಗದಿ ಮಾಡಿದ್ದ ರೂ 1,658 ಕೋಟಿಗೆ ಹೋಲಿಸಿದರೆ 6 ಪಟ್ಟಿಗಿಂತಲೂ ಅಧಿಕವಾಗುತ್ತದೆ. ಟ್ರಾಯ್ ಪ್ರತಿ ವೃತ್ತಕ್ಕೂ ಪ್ರತ್ಯೇಕ ದರ ನಿಗದಿಗೊಳಿಸಲು ಸಲಹೆ ನೀಡಿತ್ತು. ಈ ದರ ಜಮ್ಮು ಕಾಶ್ಮೀರದಲ್ಲಿ ಪ್ರತಿ ಮೆಗಾಹರ್ಟ್ಸ್‌ಗೆ ರೂ 7.6 ಕೋಟಿ ಆಗಿದ್ದರೆ. ತಮಿಳುನಾಡಿನಲ್ಲಿ ಆ ಬೆಲೆ ರೂ 187.38 ಕೋಟಿ ಆಗಿತ್ತು.

ಹೆಚ್ಚುವರಿ ತರಂಗಾಂತರಕ್ಕೆ ಜಮ್ಮು ಕಾಶ್ಮೀರದಲ್ಲಿ ರೂ 22.89 ಕೋಟಿ ನಿಗದಿ ಮಾಡಬೇಕೆಂದು ಹಾಗೂ ಆಂಧ್ರಪ್ರದೇಶದಲ್ಲಿ ರೂ 431.95 ಕೋಟಿ ಪಡೆಯಬೇಕೆಂದು ಕೂಡ ಅದು ಶಿಫಾರಸು ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.