ADVERTISEMENT

2ಜಿ: ಸುಪ್ರೀಂಕೋರ್ಟ್ ನೋಟಿಸ್

​ಪ್ರಜಾವಾಣಿ ವಾರ್ತೆ
Published 11 ಮೇ 2012, 19:30 IST
Last Updated 11 ಮೇ 2012, 19:30 IST
2ಜಿ: ಸುಪ್ರೀಂಕೋರ್ಟ್ ನೋಟಿಸ್
2ಜಿ: ಸುಪ್ರೀಂಕೋರ್ಟ್ ನೋಟಿಸ್   

ನವದೆಹಲಿ (ಐಎಎನ್‌ಎಸ್): 2ಜಿ ಪ್ರಕರಣದ ತೀರ್ಪಿನ ಪುನರ್ ಪರಿಶೀಲನಾ ಅರ್ಜಿ ವಿಷಯವನ್ನು ರಾಷ್ಟ್ರಪತಿ ಮುಂದಿಡುವಂತೆ ಕೋರಿ ಸರ್ಕಾರ ಸಲ್ಲಿಸಿದ ಅರ್ಜಿಗೆ ಸುಪ್ರೀಂಕೋರ್ಟ್ ಶುಕ್ರವಾರ ಸಂಬಂಧಪಟ್ಟ ವ್ಯಕ್ತಿಗಳಿಗೆ ನೋಟಿಸ್ ನೀಡಿದೆ.

ನೈಸರ್ಗಿಕ ಸಂಪನ್ಮೂಲಗಳನ್ನು ಕೇವಲ ಹರಾಜಿನ ಮೂಲಕವೇ ಮಾರಾಟ ಮಾಡಬೇಕೇ ಎನ್ನುವ ವಿಷಯದಲ್ಲಿ ಸ್ಪಷ್ಟನೆ ಕೇಳಿ ಸರ್ಕಾರ ಕೋರ್ಟ್‌ಗೆ ಈ ಅರ್ಜಿ ಸಲ್ಲಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ಎಚ್.ಕಪಾಡಿಯಾ ಅವರನ್ನು ಒಳಗೊಂಡ ಸಂವಿಧಾನ ಪೀಠವು ಎಲ್ಲ ರಾಜ್ಯಗಳು, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೇಂದ್ರ, ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ, ಭಾರತೀಯ ವಾಣಿಜ್ಯ ಹಾಗೂ ಕೈಗಾರಿಕಾ ಮಂಡಳಿ (ಫಿಕ್ಕಿ), ಭಾರತೀಯ ಕೈಗಾರಿಕಾ ಮಹಾಮಂಡಳಿಗೆ (ಸಿಐಐ) ನೋಟಿಸ್ ನೀಡಿದೆ.

ಇನ್ನೆರಡು ವಾರಗಳಲ್ಲಿ ನೋಟಿಸ್ ಕಳುಹಿಸಲಾಗುತ್ತದೆ, ನೋಟಿಸ್ ಪಡೆದುಕೊಂಡ ಒಂದು ವಾರದೊಳಗೆ ಸಂಬಂಧಪಟ್ಟವರು ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಹೇಳಿದ ಪೀಠವು ಮುಂದಿನ ವಿಚಾರಣೆಯನ್ನು ಜುಲೈ 10ಕ್ಕೆ ನಿಗದಿಪಡಿಸಿದೆ.

ರಾಷ್ಟ್ರಪತಿ ಪರಾಮರ್ಶೆ ಕುರಿತು ಸುಪ್ರೀಂಕೋರ್ಟ್ ಕಡ್ಡಾಯವಾಗಿ ಉತ್ತರಿಸಬೇಕಾಗಿಲ್ಲ. ಅಯೋಧ್ಯೆ ಪ್ರಕರಣದಂತೆಯೇ ಇದರಲ್ಲಿಯೂ    ಕೋರ್ಟ್ ತನ್ನ ಅಭಿಪ್ರಾಯ ತಿಳಿಸಲು ನಿರಾಕರಿಸಬಹುದು.
 

ಕಾಯ್ದಿಟ್ಟ ತೀರ್ಪು
2ಜಿ ಪ್ರಕರಣದಲ್ಲಿ ಎಸ್ಸಾರ್ ಸಮೂಹ, ಲೂಪ್ ಟೆಲಿಕಾಂ   ಪ್ರವರ್ತಕರ ವಿರುದ್ಧ ಆರೋಪ   ನಿಗದಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಇದೇ 25 ರವರೆಗೆ ಆದೇಶವನ್ನು ಕಾಯ್ದಿರಿಸಿದೆ.
ಅಂದು ಎಲ್ಲ ಐವರು ಆರೋಪಿಗಳು ಕೋರ್ಟ್‌ಗೆ ಖುದ್ದು ಹಾಜರಾಗಬೇಕು ಎಂದು ವಿಶೇಷ ಸಿಬಿಐ ನ್ಯಾಯಾಧೀಶ ಒ.ಪಿ.ಸೈನಿ      ಹೇಳಿದ್ದಾರೆ.


`ಐತಿಹಾಸಿಕ ತೀರ್ಪಿನ ನಿರೀಕ್ಷೆ~
 2ಜಿ ತೀರ್ಪಿನ ಪುನರ್ ಪರಿಶೀಲನಾ ಅರ್ಜಿ ವಿಷಯದಲ್ಲಿ ರಾಷ್ಟ್ರಪತಿ ಮಧ್ಯಪ್ರವೇಶ ಬಯಸಿರುವುದಾಗಿ ತಿಳಿಸಿರುವ ಸರ್ಕಾರ, ಈ ಸಂಬಂಧ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ವಿಚಾರಣೆಯು ಜುಲೈ 10ರಿಂದ ಪ್ರತಿದಿನವೂ ನಡೆಯಲಿದೆ ಎಂದು ತಿಳಿಸಿದೆ.

`ಪುನರ್ ಪರಿಶೀಲನಾ ಅರ್ಜಿ ವಾಪಸ್ ಪಡೆಯಲು ನಾವು ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದೆವು. ಈ ಪ್ರಕರಣದ ವಿಚಾರಣೆಗೆ ಸಂವಿಧಾನ ಪೀಠ ರಚಿಸಬೇಕು. ಕೋರ್ಟ್ ಐತಿಹಾಸಿಕ ತೀರ್ಪು ನೀಡುವ ನಿರೀಕ್ಷೆಯಲ್ಲಿದ್ದೇವೆ~ ಎಂದು ಕಾನೂನು ಸಚಿವ ಸಲ್ಮಾನ್ ಖುರ್ಷಿದ್, ಸಂಸತ್ ಭವನದ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.