ADVERTISEMENT

2ಜಿ ಹಗರಣ: ಆದೇಶ ಕಾಯ್ದಿಟ್ಟ ಸುಪ್ರೀಂಕೋರ್ಟ್

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 19:30 IST
Last Updated 10 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಗೃಹ ಸಚಿವ ಪಿ.ಚಿದಂಬರಂ ಅವರ ಪಾತ್ರವನ್ನು ತನಿಖೆಗೆ ಒಳಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಸುಪ್ರೀಂಕೋರ್ಟ್ ಸೋಮವಾರ ಕಾಯ್ದಿರಿಸಿದೆ.

ಚಿದಂಬರಂ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಸರ್ಕಾರ, ಸಿಬಿಐ ಬಲವಾಗಿ ವಾದಿಸಿದ ಕಾರಣ ಕೋರ್ಟ್ ಈ ಕ್ರಮಕ್ಕೆ ಮುಂದಾಯಿತು.

ತರಂಗಾಂತರ ಹಂಚಿಕೆ ಸಮಯದಲ್ಲಿ ಹಣಕಾಸು ಸಚಿವರಾಗಿದ್ದ ಚಿದಂಬರಂ ಹಾಗೂ ದೂರಸಂಪರ್ಕ ಸಚಿವರಾಗಿದ್ದ ಎ.ರಾಜಾ ಅವರ ಮಧ್ಯೆ ನೇರ ಸಂಪರ್ಕ ಇರಲಿಲ್ಲ ಎಂದು ಎರಡೂ ಕಡೆಯವರು ವಾದಿಸಿದರು.

ತರಂಗಾಂತರ ಹಂಚಿಕೆ ಅವಧಿ ಹಾಗೂ 2009ರ ಜನವರಿ 10ಕ್ಕೆ ಮುನ್ನ ಇವರಿಬ್ಬರ ಮಧ್ಯೆ ಮಾತುಕತೆ ನಡೆದಿಲ್ಲ ಎಂದು ದಾಖಲೆಗಳು ಹೇಳುತ್ತವೆ, ಎಲ್ಲ ಸಂಭಾಷಣೆಗಳೂ ಹಣಕಾಸು ಕಾರ್ಯರ್ಶಿ ಮೂಲಕ ಆಗಿರುವುದು ಕಂಡುಬರುತ್ತದೆ ಎಂದು ಕೇಂದ್ರವು ನ್ಯಾಯಮೂರ್ತಿ ಜಿ.ಎಸ್.ಸಿಂಘ್ವಿ ಹಾಗೂ ಎ.ಕೆ.ಗಂಗೂಲಿ ಅವರನ್ನು ಒಳಗೊಂಡ ಪೀಠಕ್ಕೆ ತಿಳಿಸಿತು.

ಆದರೆ ಸರ್ಕಾರೇತರ ಸಂಸ್ಥೆ- ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೇಂದ್ರ (ಸಿಪಿಐಎಲ್) ಹಾಗೂ ಜನತಾ ಪಕ್ಷದ ಮುಖ್ಯಸ್ಥ ಸುಬ್ರಮಣಿಯನ್ ಸ್ವಾಮಿ ಅವರು ಸಿಬಿಐ ಮತ್ತು ಕೇಂದ್ರದ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡದಂಥ ಸಮಿತಿ ರಚಿಸಬೇಕೆಂಬ ಮನವಿಗೆ ಸಂಬಂಧಿಸಿದ ಆದೇಶವನ್ನೂ ಕೋರ್ಟ್ ಕಾಯ್ದಿರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.