ADVERTISEMENT

2ನೇ ದಿನಕ್ಕೆ ಕಾಲಿಟ್ಟ ರೈಲು ತಡೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2011, 19:30 IST
Last Updated 16 ಅಕ್ಟೋಬರ್ 2011, 19:30 IST
2ನೇ ದಿನಕ್ಕೆ ಕಾಲಿಟ್ಟ ರೈಲು ತಡೆ
2ನೇ ದಿನಕ್ಕೆ ಕಾಲಿಟ್ಟ ರೈಲು ತಡೆ   

ಹೈದರಾಬಾದ್ (ಪಿಟಿಐ): ಆಂಧ್ರದ ತೆಲಂಗಾಣ ಭಾಗದಲ್ಲಿ ರೈಲು ತಡೆ ಚಳವಳಿ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಭಾನುವಾರ ರೈಲು ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.

ಅಕ್ಟೋಬರ್ 15ರಿಂದ 17ರವರೆಗೆ `ರೈಲು ರೋಕೋ~ ಚಳವಳಿ ನಡೆಸುವಂತೆ ತೆಲಂಗಾಣ ಜಂಟಿ ಕ್ರಿಯಾ ಸಮಿತಿ (ಟಿಜೆಎ) ಕರೆ ನೀಡಿರುವ ಹಿನ್ನೆಲೆಯಲ್ಲಿ ಈ ಚಳವಳಿ ನಡೆಯುತ್ತಿದೆ.

`ರೈಲು ರೋಕೋ~ ಚಳವಳಿಯಲ್ಲಿ ಭಾಗವಹಿಸಿ ಶನಿವಾರ ಬಂಧಿತರಾದ ತೆಲಂಗಾಣ ಭಾಗದ ಸಂಸದರು ಮತ್ತು ಶಾಸಕರನ್ನು ಭಾನುವಾರ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ADVERTISEMENT

ಸಂಸದರಾದ ವಿಜಯಶಾಂತಿ, ಪೊನ್ನಂ ಪ್ರಭಾಕರ್, ಎಸ್. ರಾಜಯ್ಯ, ಶಾಸಕರಾದ ಹರೀಶ್ ರಾವ್, ಟಿ. ರಾಜಯ್ಯ ಮತ್ತು ಮಾಜಿ ಸಚಿವ ಜೀವನ್ ರೆಡ್ಡಿ ಮತ್ತಿತರರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹಳಿಗಳ ಮೇಲೆ ಕುಳಿತು ರೈಲು ತಡೆ: ತೆಲಂಗಾಣ ಪರ ಗುಂಪೊಂದು ಖಮ್ಮಮ್ ಜಿಲ್ಲೆಯ ಗಾಂಧಿಪುರಂನಲ್ಲಿ ಹಳಿಗಳ ಮೇಲೆ ಕುಳಿತು ರೈಲು ತಡೆ ನಡೆಸಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನಡೆಸಿದರು. ಈ ಗುಂಪಿನ ಸದಸ್ಯರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಂಧಿಸಿದ್ದಾರೆ.

ನಲಗೊಂಡ, ಮೆಹಬೂಬ್ ನಗರ, ನಿಜಾಮಾಬಾದ್ ಮತ್ತು ವಾರಂಗಲ್ ಜಿಲ್ಲೆಗಳ ರೈಲು ನಿಲ್ದಾಣಗಳ ಮುಂದೆ ಪ್ರತಿಭಟನೆಗಳು ನಡೆದಿವೆ. ಅನೇಕ ಕಡೆ ಹಳಿಗಳ ಮೇಲೆ ಕುಳಿತು ರೈಲು ತಡೆ ನಡೆಸಲಾಗಿದ್ದು, ಪೊಲೀಸರು ಹಲವರನ್ನು ಬಂಧಿಸಿದ್ದಾರೆ.

ಬಂಧಿತರ ಬಿಡುಗಡೆಗೆ ಒತ್ತಾಯ:
ಈ ಮಧ್ಯೆ, ಹೈದರಾಬಾದ್ ಸೇರಿದಂತೆ ತೆಲಂಗಾಣ ಭಾಗದ ವಿವಿಧ ಜಿಲ್ಲೆಗಳಲ್ಲಿ ಬಂಧಿಸಲಾಗಿರುವ ಚಳವಳಿಗಾರರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಅನೇಕ ಪ್ರತಿಭಟನೆಗಳು ನಡೆದಿವೆ.
ಸಚಿವರ ವಸತಿ ಗೃಹಗಳ ಮುಂದೆ ಗದ್ದಲ ಎಬ್ಬಿಸಲು ಮುಂದಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ (ಎಬಿವಿಪಿ) 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ರೈಲು ರದ್ದು- ಪ್ರಯಾಣಿಕರ ಪರಿತಾಪ: ತೆಲಂಗಾಣ ಭಾಗದಲ್ಲಿ ರೈಲು ತಡೆ ತೀವ್ರಗೊಂಡಿರುವುದರಿಂದ ದಕ್ಷಿಣ ಮಧ್ಯ ರೈಲ್ವೆ (ಎಸ್‌ಸಿಆರ್) 124ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ರದ್ದು ಪಡಿಸಿದೆ. ಮತ್ತೆ ಕೆಲವು ರೈಲುಗಳ ಮಾರ್ಗ ಬದಲು ಮತ್ತು ಸಂಚಾರ ಸಮಯದಲ್ಲಿ ಬದಲಾವಣೆ ಮಾಡಿದೆ. ಇದರಿಂದ ಪ್ರಯಾಣಿಕರು ಪರಿತಪಿಸುವಂತಾಗಿದೆ. ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯವಾಗಿರುವುದರಿಂದ ಸದಾ ಗಿಜಿಗಿಡುತ್ತಿದ್ದ ನಾಂಪಲ್ಲಿ, ಸಿಕಂದರಾಬಾದ್ ಮತ್ತು ಕಾಚಿಗುಡ ರೈಲು ನಿಲ್ದಾಣಗಳು ಬಿಕೋ ಎನ್ನುತ್ತಿವೆ.

`ರೈಲು ತಡೆ ಮುಂದುವರಿದಿದ್ದು, ಪರಿಸ್ಥಿತಿ ಶಾಂತವಾಗಿದೆ. ರೈಲುಗಳಿಗೆ ಮತ್ತು ರೈಲ್ವೆ ಆಸ್ತಿಪಾಸ್ತಿಗೆ ಭದ್ರತೆ ಒದಗಿಸಿದ್ದೇವೆ~ ಎಂದು ರೈಲ್ವೆ ಡಿಜಿಪಿ ವಿಎಸ್‌ಕೆ ಕೌಮುದಿ ಹೇಳಿದರು.

ಬಸ್ ಸಂಚಾರ ಸುಗಮ
ಆಂಧ್ರದಲ್ಲಿ ರೈಲು ತಡೆ ಚಳವಳಿಯಿಂದ ತೊಂದರೆ ಸಿಲುಕಿರುವ ಪ್ರಯಾಣಿಕರಿಗೆ ಬಸ್ ಸಂಚಾರ ಶನಿವಾರದಿಂದ ಮತ್ತೆ ಆರಂಭವಾಗಿದ್ದು ಕೊಂಚ ನೆಮ್ಮದಿ ನೀಡಿದೆ.

ಒಂದು ತಿಂಗಳಿಗೂ ಹೆಚ್ಚು ಕಾಲ ಮುಷ್ಕರ ನಡೆಸಿದ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಎಪಿಎಸ್‌ಆರ್‌ಟಿಸಿ) ತೆಲಂಗಾಣ ಪರ ನೌಕರರ ಒಕ್ಕೂಟವು ಶುಕ್ರವಾರ ಮುಷ್ಕರವನ್ನು ಅಂತ್ಯಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.