ADVERTISEMENT

2 ಜಿ: ಜಂಟಿ ಸಮಿತಿ ಅವಧಿ ವಿಸ್ತರಣೆ: 5ರಂದು ಲೋಕಸಭೆಯಲ್ಲಿ ಗೊತ್ತುವಳಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2011, 19:30 IST
Last Updated 2 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಗರಣಕ್ಕೆ ಸಂಬಂಧಿಸಿದಂತೆ ರಚಿಸಿರುವ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಅವಧಿಯನ್ನು ಮುಂದಿನ ಬಜೆಟ್ ಅಧಿವೇಶನದವರೆಗೆ ವಿಸ್ತರಿಸಬೇಕೆಂದು ಕೋರಿ ಸೋಮವಾರ ಲೋಕಸಭೆಯಲ್ಲಿ ಗೊತ್ತುವಳಿಯೊಂದನ್ನು ಮಂಡಿಸಲಾಗುತ್ತದೆ.

ಮುಂಗಾರು ಅಧಿವೇಶನದ ಕೊನೆಯ ದಿನ ಈ ಸಮಿತಿಯ ಅವಧಿ ಮುಗಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಅವಧಿ ವಿಸ್ತರಿಸಲು ಕೋರಿ ಗೊತ್ತುವಳಿ ಮಂಡಳಿಸಲು ನಿರ್ಧರಿಸಲಾಗಿದೆ.

1998 ರಿಂದ 2009 ರವರೆಗೆ ಹಂಚಿಕೆ, ದೂರಸಂಪರ್ಕ ಹಾಗೂ ಸ್ಪೆಕ್ಟ್ರಂ ಪರವಾನಗಿ ದರಕ್ಕೆ ಸಂಬಂಧಪಟ್ಟ ವಿಷಯಗಳನ್ನು ಪರಿಶೀಲಿಸಲೆಂದು ಕಳೆದ ಮಾರ್ಚ್ 4ರಂದು ಈ ಸಮಿತಿ ರಚಿಸಲಾಗಿದೆ.

`ಇದೊಂದು ಸುದೀರ್ಘ ಪ್ರಕ್ರಿಯೆ. ಅನೇಕರನ್ನು ವಿಚಾರಣೆಗೊಳಪಡಿಸಬೇಕು. ಆದ ಕಾರಣ ನಾವು ಸಮಿತಿಯ ಅವಧಿ ವಿಸ್ತರಿಸಬೇಕೆಂದು ಕೋರಲು ನಿರ್ಧರಿಸಿದ್ದೇವೆ. ಈ ಸಂಬಂಧ ಸೋಮವಾರ ಲೋಕಸಭೆಯಲ್ಲಿ ಗೊತ್ತುವಳಿ ಮಂಡಿಸಲಿದ್ದೇವೆ~ಎಂದು ಮೂಲಗಳು ತಿಳಿಸಿವೆ.

ಲೋಕಸಭೆಯ 20 ಹಾಗೂ ರಾಜ್ಯಸಭೆಯ 10 ಸದಸ್ಯರನ್ನು ಒಳಗೊಂಡ ಸಮಿತಿಯು ಈವರೆಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಸಿಬಿಐ ಹಾಗೂ ದೂರಸಂಪರ್ಕ ಇಲಾಖೆಯ ಕೆಲವು ಮಾಜಿ ಕಾರ್ಯದರ್ಶಿಗಳನ್ನು ಮಾತ್ರ ವಿಚಾರಣೆಗೊಳಪಡಿಸಿದೆ.
 
ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ(ಟಿಆರ್‌ಎಐ) ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ, ದೂರಸಂಪರ್ಕ ಖಾತೆ ಮಾಜಿ ಸಚಿವರು, ಕಾರ್ಯದರ್ಶಿಗಳನ್ನು ಸಮಿತಿಯು ವಿಚಾರಣೆಗೆ ಒಳಪಡಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.