ADVERTISEMENT

2 ಜಿ ಹಗರಣದಲ್ಲಿ ಚಿದು ಪಾತ್ರ: ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ನಕಾರ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2012, 6:10 IST
Last Updated 2 ಫೆಬ್ರುವರಿ 2012, 6:10 IST

ನವದೆಹಲಿ (ಪಿಟಿಐ): 2 ಜಿ ಸ್ಪೆಕ್ಟ್ರಂ ಹಗರಣದಲ್ಲಿ ಕೇಂದ್ರದ ಗೃಹಖಾತೆ ಸಚಿವ ಪಿ ಚಿದಂಬರಂ ಅವರು ಪಾತ್ರದ ಕುರಿತು ತನಿಖೆ ನಡೆಸಬೇಕೆ? ಬೇಡವೆ? ಎಂಬುದನ್ನು ಈ ಹಗರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ತೀರ್ಮಾನಿಸಲಿ ಎಂದಿರುವ ಸುಪ್ರೀಂ ಕೋರ್ಟ್,  ಅದೇ ಸಂದರ್ಭದಲ್ಲಿ ಈ ಹಗರಣದಲ್ಲಿನ ಚಿದಂಬರಂ ಅವರ ಪಾತ್ರದ ಬಗ್ಗೆ ಸಿಬಿಐಗೆ ತನಿಖೆ ನಡೆಸುವಂತೆ ನಿರ್ದೇಶನ ನೀಡಬೇಕೆಂಬ ಮನವಿಯನ್ನು ಗುರುವಾರ ತಳ್ಳಿಹಾಕಿದೆ.

2 ಜಿ ಹಗರಣದಲ್ಲಿ ಚಿದಂಬರಂ ಅವರ ಪಾತ್ರದ ಕುರಿತು ತನಿಖೆ ನಡೆಸುವಂತೆ ನಿರ್ದೇಶಿಸಬೇಕೆಂಬ ಜನತಾ ಪಕ್ಷದ ಮುಖ್ಯಸ್ಥ ಸುಬ್ರಮಣಿಯನ್ ಸ್ವಾಮಿ ಅವರ ಅರ್ಜಿ ವಿಚಾರಣೆ ನಡೆಸುತ್ತಿರುವ  ನ್ಯಾಯಮೂರ್ತಿಗಳಾದ ಜಿ.ಎಸ್. ಸಿಂಘ್ವಿ ಮತ್ತು ಎ.ಕೆ.ಗಂಗೂಲಿ ಅವರಿದ್ದ ಸುಪ್ರೀಂ ಕೋರ್ಟ್, ತನ್ನ ಈ ಆದೇಶ ವಿಚಾರಣೆ ನಡೆಯುತ್ತಿರುವ ನ್ಯಾಯಾಲಯದ ಕಲಾಪದ ಮೇಲೆ ಯಾವುದೇ ಪರಿಣಾಮ ಬೀರದು ಎಂದು  ಹೇಳಿದೆ. 

ಈ ಸಂಬಂಧ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ, ಎರಡು ವಾರಗಳಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿ ಎಂದೂ ಸುಪ್ರೀಂ ಕೋರ್ಟ್ ತಿಳಿಸಿದೆ.

ADVERTISEMENT

ಗೃಹ ಸಚಿವ ಚಿದಂಬರಂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂಬ ಸುಬ್ರಮಣಿಯನ್ ಸ್ವಾಮಿ ಅವರ ಅರ್ಜಿಯ ವಿಚಾರಣೆಯನ್ನು  ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಓ.ಪಿ.ಸೈನಿ ಅವರು ನಡೆಸುತ್ತಿದ್ದಾರೆ. ಅವರು ಫೆ.4 ರಂದು ಈ ಸಂಬಂಧ ಆದೇಶ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.