ದೆಹಲಿಯ ಕರೋಲ್ ಬಾಗ್‌ನಲ್ಲಿರುವ ವಿಶಾಲ್ ಮಾರ್ಟ್ ಶೋರೂಂನಲ್ಲಿ ಹೊತ್ತಿಕೊಂಡಿದ್ದ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿದರು.
ಪಿಟಿಐ ಚಿತ್ರ
ನವದೆಹಲಿ: ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿರುವ ವಿಶಾಲ್ ಮೆಗಾ ಮಾರ್ಟ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಪದಮ್ ಸಿಂಗ್ ರಸ್ತೆಯಲ್ಲಿರುವ ನಾಲ್ಕು ಅಂತಸ್ತಿನ ಕಟ್ಟಡದ ಎರಡನೇ ಮಹಡಿಯಲ್ಲಿ ಶುಕ್ರವಾರ ಸಂಜೆ 6 ಗಂಟೆ ನಂತರ ಬೆಂಕಿ ಹೊತ್ತಿಕೊಂಡಿದೆ. 13 ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿದವು.
ಕುಮಾರ್ ಧೀರೇಂದರ್ ಪ್ರತಾಪ್ (25) ಎಂದು ಗುರುತಿಸಲಾಗಿರುವ ವ್ಯಕ್ತಿಯ ಶವವು ಲಿಫ್ಟ್‌ನಲ್ಲಿ ಪತ್ತೆಯಾಗಿದ್ದು, ಇವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕಟ್ಟಡದಲ್ಲಿ ಇನ್ನೊಬ್ಬ ವ್ಯಕ್ತಿಯ ಶವ ಪತ್ತೆಯಾಗಿದ್ದು, ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
ಬೆಂಕಿಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಲಿಫ್ಟ್‌ನಲ್ಲಿ ಸಿಲುಕಿದ್ದೀನಿ ಸಹಾಯ ಮಾಡಿ...
‘ಅಣ್ಣಾ ನಾನು ಲಿಫ್ಟ್‌ನಲ್ಲಿ ಸಿಲುಕಿದ್ದೇನೆ. ನನಗೆ ಉಸಿರಾಡಲು ಆಗುತ್ತಿಲ್ಲ. ಏನಾದರೂ ಸಹಾಯ ಮಾಡು...’ ಇದು ಲಿಫ್ಟ್‌ನಲ್ಲಿ ಸಿಲುಕಿ ಸಾವಿಗೀಡಾದ ಕುಮಾರ್ ಧೀರೇಂದರ್ ಪ್ರತಾಪ್ ಅವರು ತನ್ನ ಅಣ್ಣನಿಗೆ ಕಳುಹಿಸಿದ ಕೊನೆಯ ಸಂದೇಶ.
ಬೆಂಕಿಯಿಂದಾಗಿ ಹೊಗೆ ಆವರಿಸಿದ್ದ ಲಿಫ್ಟ್‌ನಲ್ಲಿ ಸಿಲುಕಿ ಸಹಾಯಕ್ಕೆ ಹತಾಶೆಯಿಂದ ಎದುರು ನೋಡಿ ಕೊನೆಗೆ ಸಾವಿಗೀಡಾದ ಕುಮಾರ್ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಬನಾರಸ್‌ನ ಕುಮಾರ್ ಅವರು ಪರೀಕ್ಷೆಗೆ ತಯಾರಿ ನಡೆಸಲು ದೆಹಲಿಯಲ್ಲಿ ನೆಲಸಿದ್ದರು.
ಸಂಜೆ 6.51ಕ್ಕೆ ತಮ್ಮನ ಸಂದೇಶ ನೋಡಿದ ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದೆ. ಆದರೆ ಅಷ್ಟರಲ್ಲಿ ಅವನು ಕೊನೆಯುಸಿರೆಳೆದಿದ್ದ ಎಂದು ಸಹೋದರ ವೀರೇಂದ್ರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.