ADVERTISEMENT

202 ಸಂಸದರ ಮೇಲೆ ಕ್ರಿಮಿನಲ್ ಆರೋಪ!

​ಪ್ರಜಾವಾಣಿ ವಾರ್ತೆ
Published 29 ಜುಲೈ 2013, 19:59 IST
Last Updated 29 ಜುಲೈ 2013, 19:59 IST
202 ಸಂಸದರ ಮೇಲೆ ಕ್ರಿಮಿನಲ್ ಆರೋಪ!
202 ಸಂಸದರ ಮೇಲೆ ಕ್ರಿಮಿನಲ್ ಆರೋಪ!   

ಬೆಂಗಳೂರು: ಲೋಕಸಭಾ ಸದಸ್ಯರ ಪೈಕಿ ಶೇ 30ರಷ್ಟು ಮಂದಿ ಕ್ರಿಮಿನಲ್ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ. ರಾಜ್ಯಸಭಾ ಸದಸ್ಯರ ಪೈಕಿ ಶೇ 17ರಷ್ಟು ಮಂದಿ ಇದೇ ಸ್ವರೂಪದ ಪ್ರಕರಣಗಳಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ ಎಂಬ ಸಂಗತಿ ರಾಷ್ಟ್ರೀಯ ಚುನಾವಣಾ ಕಣ್ಗಾವಲು ಸಂಸ್ಥೆ (ಎನ್‌ಇಡಬ್ಲ್ಯೂ) ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ (ಎಡಿಆರ್) ನಡೆಸಿದ ಅಧ್ಯಯನದಿಂದ ಗೊತ್ತಾಗಿದೆ.

ದೇಶದ ಎಲ್ಲ ರಾಜ್ಯಗಳ ವಿಧಾನಸಭೆಗಳ ಸದಸ್ಯರ ಪೈಕಿ 1,258 ಮಂದಿ ವಿವಿಧ ರೀತಿಯ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ದೇಶದ 543 ಲೋಕಸಭಾ ಸದಸ್ಯರಲ್ಲಿ 162 ಮಂದಿ ಹಾಗೂ 232 ರಾಜ್ಯಸಭಾ ಸದಸ್ಯರಲ್ಲಿ 40 ಜನ ಇಂಥ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿದ್ದಾರೆ ಎಂದು ಈ ಎರಡು ಸಂಸ್ಥೆಗಳ ವರದಿ ಹೇಳಿದೆ.

2004ರ ನಂತರ ದೇಶದಲ್ಲಿ ನಡೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಪೂರ್ವಾಪರವನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಹಣ ಹಾಗೂ ತೋಳ್ಬಲ ಹೆಚ್ಚಿರುವ ಅಭ್ಯರ್ಥಿಗಳು ಚುನಾವಣೆಗಳಲ್ಲಿ ಗೆದ್ದಿರುವುದೂ ಅಧ್ಯಯನದ ವೇಳೆ ಬೆಳಕಿಗೆ ಬಂದಿದೆ ಎಂದು ಎನ್‌ಇಡಬ್ಲ್ಯೂ ಮತ್ತು ಎಡಿಆರ್ ಸಂಸ್ಥೆಗಳು ಹೇಳಿವೆ.

2004ರ ನಂತರ ನಡೆದ ಚುನಾವಣೆಗಳಲ್ಲಿ ಮತ್ತೆ ಮತ್ತೆ ಸ್ಪರ್ಧಿಸಿರುವ ಒಟ್ಟು 4,181 ಅಭ್ಯರ್ಥಿಗಳು ನೀಡಿರುವ ವಿವರಗಳನ್ನು ಪರಿಶೀಲನೆಗೆ ಒಳಪಡಿಸಿದಾಗ ಕೆಲವು ಕುತೂಹಲಕರ ಸಂಗತಿಗಳು ಬಯಲಾಗಿವೆ. ಇಷ್ಟು ಮಂದಿ ಅಭ್ಯರ್ಥಿಗಳ ಪೈಕಿ 3,173 ಅಭ್ಯರ್ಥಿಗಳ ಆಸ್ತಿಯ ಪ್ರಮಾಣ ಒಂದು ಚುನಾವಣೆಯಿಂದ ಇನ್ನೊಂದು ಚುನಾವಣೆಗೆ ಸರಾಸರಿ 2.3 ಕೋಟಿ ರೂಪಾಯಿಯಷ್ಟು ಹೆಚ್ಚಳವಾಗಿದೆ. ಅಂದರೆ ಐದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಅವರ ಆಸ್ತಿಯ ಪ್ರಮಾಣ ಶೇಕಡ 134ರಷ್ಟು ಹೆಚ್ಚಳ ಆಗಿದೆ.

ಕ್ರಿಮಿನಲ್‌ಗಳಿಗೆ ಮಣೆ
ಚುನಾವಣೆ ಹತ್ತಿರ ಬರುತ್ತಿದ್ದಂತೆ, `ಈ ಬಾರಿ ನಾವು ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದಿಲ್ಲ' ಎಂದು ಎಲ್ಲ ಪಕ್ಷಗಳು ಘೋಷಿಸುತ್ತವೆ. ಆದರೆ ಅಧ್ಯಯನದ ಪ್ರಕಾರ, ಎಲ್ಲ ಪಕ್ಷಗಳೂ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳಿಗೆ ಮತ್ತೆ ಮತ್ತೆ ಟಿಕೆಟ್ ನೀಡಿವೆ. ಪರಿಶೀಲನೆ ಒಳಗಾದ 4,181 ಅಭ್ಯರ್ಥಿಗಳಲ್ಲಿ 1072 ಅಭ್ಯರ್ಥಿಗಳು ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುವಾಗಲೇ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದರು. ಅವರ ಪೈಕಿ 788 ಜನ ಎರಡನೆಯ ಬಾರಿಯೂ ಟಿಕೆಟ್ ಪಡೆದುಕೊಂಡಿದ್ದಾರೆ. ಅಂದರೆ ಶೇಕಡ 74ರಷ್ಟು ಮಂದಿ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದರೂ, ಮತ್ತೆ ಮತ್ತೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT