ADVERTISEMENT

ಸಂಸತ್ ಮೇಲೆ ಉಗ್ರರ ದಾಳಿಗೆ 20 ವರ್ಷ: ಸಂಸದರಿಂದ ಹುತಾತ್ಮರ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 13:52 IST
Last Updated 13 ಡಿಸೆಂಬರ್ 2021, 13:52 IST
2001ರ ಡಿಸೆಂಬರ್ 13ರಂದು ಸಂಸತ್‌ ಮೇಲೆ ಉಗ್ರರು ನಡೆಸಿದ್ದ ದಾಳಿ ವೇಳೆ ಅಸುನೀಗಿದ್ದ ಭದ್ರತಾ ಸಿಬ್ಬಂದಿಗೆ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ ಸೋಮವಾರ ನವದೆಹಲಿಯ ಸಂಸತ್‌ ಭವನದಲ್ಲಿ ಗೌರವ ನಮನ ಸಲ್ಲಿಸಿದರು
2001ರ ಡಿಸೆಂಬರ್ 13ರಂದು ಸಂಸತ್‌ ಮೇಲೆ ಉಗ್ರರು ನಡೆಸಿದ್ದ ದಾಳಿ ವೇಳೆ ಅಸುನೀಗಿದ್ದ ಭದ್ರತಾ ಸಿಬ್ಬಂದಿಗೆ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ ಸೋಮವಾರ ನವದೆಹಲಿಯ ಸಂಸತ್‌ ಭವನದಲ್ಲಿ ಗೌರವ ನಮನ ಸಲ್ಲಿಸಿದರು   

ನವದೆಹಲಿ: ಸಂಸತ್ತಿನ ಮೇಲೆ ಉಗ್ರರು ದಾಳಿ ನಡೆಸಿದ್ದ ಘಟನೆ ನಡೆದು ಈಗ 20 ವರ್ಷ ಆಗಿದ್ದು, ಅಂದು ಘಟನೆಯಲ್ಲಿ ಮೃತಪಟ್ಟಿದ್ದ ಭದ್ರತಾ ಸಿಬ್ಬಂದಿಗೆ ಸಂಸದರು ಸೋಮವಾರ ಗೌರವನಮನ ಸಲ್ಲಿಸಿದರು.

ಸಂಸತ್ತಿನ ಉಭಯ ಸದನಗಳಲ್ಲಿ ಸದಸ್ಯರು ಎದ್ದುನಿಂತು, ಕೆಲಕಾಲ ಮೌನವಹಿಸಿ ಅಗಲಿದ ಸಿಬ್ಬಂದಿಗೆ ಗೌರವ ಸಲ್ಲಿಸಿದರು. 2001ರ ಡಿಸೆಂಬರ್‌ 13ರಂದು ಸಂಸತ್ತಿನ ಮೇಲೆ ಉಗ್ರರು ದಾಳಿ ನಡೆಸಿದ್ದರು. ಆಗ 9 ಮಂದಿ ಸಿಬ್ಬಂದಿ ಮೃತಪಟ್ಟಿದ್ದರು.

ದಾಳಿ ನಡೆಸಿದ್ದ ಲಷ್ಕರ್ ಎ ತಯಬಾ (ಎಲ್‌ಇಟಿ), ಜೈಷ್‌ ಎ ಮೊಹಮ್ಮದ್‌ ಸಂಘಟನೆಗೆ ಸೇರಿದ್ದ ಎಲ್ಲ ಐದು ಭಯೋತ್ಪಾದಕರು ಬಲಿಯಾಗಿದ್ದರು.

ADVERTISEMENT

ಸೋಮವಾರ ಬೆಳಿಗ್ಲೆ ಕಲಾಪ ಆರಂಭವಾಗುತ್ತಿದ್ದಂತೆಯೇ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು. ಬಳಿಕ ಸದಸ್ಯರು ಎದ್ದು ನಿಂತು ಗೌರವ ನಮನ ಸಲ್ಲಿಸಿದರು.

ರಾಜ್ಯಸಭೆಯಲ್ಲಿ ಸಭಾಪತಿ ಎಂ.ವೆಂಕಯ್ಯನಾಯ್ಡು ಅವರು ವಿಷಯ ಪ್ರಸ್ತಾಪಿಸಿದ್ದು, ಭಯೋತ್ಪಾದನೆಯ ವಿರುದ್ಧ ಹೋರಾಡುವ ಬದ್ಧತೆಯನ್ನು ನಾವು ಎಲ್ಲರೂ ಹೊಂದಬೇಕಾಗಿದೆ ಎಂದು ಹೇಳಿದರು.

ಪ್ರಧಾನಿ ಗೌರವ ನಮನ

ನವದೆಹಲಿ: 2001ರಲ್ಲಿ ನಡೆದಿದ್ದ ಸಂಸತ್ತಿನ ಮೇಲಿನ ದಾಳಿ ಘಟನೆಯಲ್ಲಿ ಅಸುನೀಗಿದ್ದ ಭದ್ರತಾ ಸಿಬ್ಬಂದಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಗೌರವ ನಮನ ಸಲ್ಲಿಸಿದ್ದಾರೆ.

‘ಅಗಲಿದ ಸಿಬ್ಭಂದಿಯ ಸೇವೆಯು ಅನನ್ಯವಾದುದು. ಅವರ ತ್ಯಾಗವು ಪ್ರತಿಯೊಬ್ಬ ನಾಗರಿಕರಿಗೆ ಪ್ರೇರೇಪಣೆ ನೀಡಲಿದೆ’ ಎಂದು ಪ್ರಧಾನಿ ಈ ಕುರಿತು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.