ADVERTISEMENT

25 ವರ್ಷಗಳ ಹಿಂದೆ: ಪಟೇಲ್‌ ನಿಲುವು ದಿಢೀರ್‌ ಬದಲು

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 23:01 IST
Last Updated 15 ಜುಲೈ 2024, 23:01 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಶುಕ್ರವಾರ ಜುಲೈ 16 1999

ಪಟೇಲ್‌ ನಿಲುವು ದಿಢೀರ್‌ ಬದಲು

ಬಿಜೆಪಿ ಕೂಟ ಸೇರುವ ಇಂಗಿತ 

ADVERTISEMENT

ಬೆಂಗಳೂರು, ಜುಲೈ 15– ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಅವರು ಕೇವಲ 24 ಗಂಟೆಗಳಲ್ಲಿ ತಮ್ಮ ನಿಲುವನ್ನು ದಿಢೀರ್‌ ಬದಲಾಯಿಸಿ ಬಿಜೆಪಿ ನೇತೃತ್ವದ ‘ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ’ದ ಜತೆಗೆ ಸೇರುವ ಇಂಗಿತವನ್ನು ಇಂದು ಇಲ್ಲಿ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಮತ್ತು ಬಿಜೆಪಿ ಇವೆರಡರಿಂದ ಸಮನಾಂತರ ದೂರದಲ್ಲಿದ್ದು ಜನತಾದಳದ ಬಲ ಹೆಚ್ಚಿಸಬೇಕಾಗಿದೆ ಎಂದು ಜನತಾದಳದ ಕಾರ್ಯಕಾರಿ ಸಮಿತಿಯ ನಿರ್ಣಯಕ್ಕೆ ಬದ್ಧರಾಗಿರುವುದಾಗಿ ನಿನ್ನೆ ಮಧ್ಯಾಹ್ನ ಹೇಳಿದ್ದ ಮುಖ್ಯಮಂತ್ರಿ ಅವರು ಇಂದು ‘ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಜತೆಗೆ ಹೊಂದಾಣಿಕೆ ಮಾಡಿಕೊಳ್ಳಲು ತಾತ್ವಿಕವಾಗಿ ಒಪ್ಪಿದ್ದೇನೆ. ಇದು ಜನತಾದಳದ ರಾಜಕೀಯ ವ್ಯವಹಾರಗಳ ಸಮಿತಿಯ ಒಪ್ಪಿಗೆಯನ್ನು ಪಡೆಯಬೇಕಾಗಿದೆ’ ಎಂದು ಲೋಕಶಕ್ತಿ ನಾಯಕ ರಾಮಕೃಷ್ಣ ಹೆಗಡೆ ಮತ್ತು ಸಮತಾ ಪಕ್ಷದ ನಾಯಕ ಜಾರ್ಜ್‌ ಫರ್ನಾಂಡಿಸ್‌ ಅವರ ಜತೆ ಮಾತುಕತೆ ನಡೆಸಿದ ನಂತರ ತಿಳಿಸಿದ್ದಾರೆ. 

ಆದರೆ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷಗಳನ್ನು ಸಮಾನದೂರ ಉಳಿಸಿಕೊಂಡು ಚುನಾವಣೆ ಎದುರಿಸಲು ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ ಕೈಗೊಂಡ ನಿರ್ಣಯಕ್ಕೆ ಬದ್ಧರಾಗಿರುವುದಾಗಿ ಪುನರುಚ್ಚರಿಸಿದರು. ಇದರಿಂದ ಪಟೇಲ್‌ ಅವರ ನಿಲುವು ವೈಯಕ್ತಿಕ ಎಂದು ನೇರವಾಗಿ ಹೇಳದಿದ್ದರೂ ಪರೋಕ್ಷವಾಗಿ ಆ ಅರ್ಥದಲ್ಲಿ ಅವರ ನಿಲುವು ಸ್ಪಷ್ಟಪಡಿಸಿದರು.

ಕಾರ್ಗಿಲ್‌ ಕಾರ್ಯಾಚರಣೆಗೆ ₹ 1500 ಕೋಟಿ ವೆಚ್ಚ

ಮುಂಬೈ, ಜುಲೈ 15 (ಯುಎನ್‌ಐ)– ಕಾರ್ಗಿಲ್‌ ಕಾರ್ಯಾಚರಣೆಯಿಂದ ಬೊಕ್ಕಸದ ಮೇಲೆ ಉಂಟಾಗಿರುವ ಭಾರಿ ಆರ್ಥಿಕ ಹೊರೆಯ ಹಿನ್ನೆಲೆಯಲ್ಲಿ ಯುದ್ಧ ತೆರಿಗೆಯನ್ನು ವಿಧಿಸಲು ರಾಷ್ಟ್ರಪತಿ ಕೆ.ಆರ್‌. ನಾರಾಯಣನ್‌ ಅವರು ಮೌಖಿಕ ಸಮ್ಮತಿ ನೀಡಿದ್ದಾರೆಂದು ತಿಳಿದುಬಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.