ADVERTISEMENT

ರಾಜಸ್ಥಾನ: ರೈಲಿನಿಂದ ಜಿಗಿದು ಮೂವರು ಯುವಕರ ಸಾವು

ನಿರುದ್ಯೋಗದಿಂದ ಆತ್ಮಹತ್ಯೆ ಶಂಕೆ

ಪಿಟಿಐ
Published 22 ನವೆಂಬರ್ 2018, 12:15 IST
Last Updated 22 ನವೆಂಬರ್ 2018, 12:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜೈಪುರ: ಇಲ್ಲಿನ ಅಲ್ವಾರ್‌ ಜಿಲ್ಲೆಯಲ್ಲಿ ಚಲಿಸುತ್ತಿದ್ದ ರೈಲಿನಿಂದ ಮೂವರು ಸ್ನೇಹಿತರು ಜಿಗಿದು ಸಾವನ್ನಪ್ಪಿದ್ದು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಯುವಕರೇ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನವಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಾಥಮಿಕ ತನಿಖೆ ಪ್ರಕಾರ, ಕೆಲಸ ಸಿಗದೇ ಈ ಯುವಕರು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಆದರೆ ನಿಖರ ಕಾರಣ ತಿಳಿದುಬಂದಿಲ್ಲ.

ಮಂಗಳವಾರ ರಾತ್ರಿ ಆರು ಯುವಕರು ಆತ್ಮಹತ್ಯೆ ಮಾಡಿಕೊಳ್ಳಲು ರೈಲ್ವೆ ಹಳಿಗೆ ಬಂದಿದ್ದರು ಎಂದು ಸ್ನೇಹಿತರೇ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಚಲಿಸುತ್ತಿದ್ದ ರೈಲಿನಿಂದ ಜಿಗಿದು ‌ಮನೋಜ್‌ (24) ಸತ್ಯನಾರಾಯಣ್‌ ಮೀನಾ (22), ರಿತುರಾಜ್‌ ಮೀನಾ (17) ಸಾವನ್ನಪ್ಪಿದ್ದರೆ, ಅಭಿಷೇಕ್‌ ಮೀನಾ (22) ತೀವ್ರವಾಗಿ ಗಾಯಗೊಂಡರು.

ಇವರ ಜೊತೆಗಿದ್ದ ರಾಹುಲ್‌, ಸಂತೋಷ್‌ ಯಾವುದೇ ನಿರ್ಧಾರ ತೆಗೆದುಕೊಳ್ಳದೇ ಸುಮ್ಮನಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

‘ನಿರುದ್ಯೋಗದಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ನಿರ್ಧರಿಸಿದ್ದೇವೆ ಎಂದು ಸ್ನೇಹಿತರ ಬಳಿ ಹೇಳಿಕೊಂಡಿದ್ದರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದಕ್ಕಿಂತ ಹೆಚ್ಚಿನ ಆಯಾಮವಿದೆ. ತನಿಖೆ ಮುಗಿದ ಬಳಿಕವಷ್ಟೇ ಖಚಿತ ಕಾರಣ ತಿಳಿದುಬರಲಿದೆ’ ಎಂದು ಅಲ್ವಾರ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಜೇಂದ್ರಸಿಂಗ್‌ ತಿಳಿಸಿದರು.

ಮೃತ ಮನೋಜ್‌ ಮತ್ತು ಸತ್ಯನಾರಾಯಣ್‌ ಪದವೀಧರರಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆಯಲ್ಲಿದ್ದರು. ರಿತುರಾಜ್‌ ಮಾತ್ರ ಬಿ.ಎ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದ.

ಗಾಯಾಳುವನ್ನು ಜೈಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.