ಶ್ರೀನಗರ: ಪಾಕಿಸ್ತಾನ ಪ್ರಾಯೋಜಿತ ಮಾದಕವಸ್ತು ಭಯೋತ್ಪಾದನಾ ಜಾಲ ಭೇದಿಸಿರುವ ಪೊಲೀಸರು, ಲಷ್ಕರ್ ಎ ತಯಬಾ (ಎಲ್‌ಇಟಿ) ಉಗ್ರರ ಮೂವರು ಸಹಚರರನ್ನು ಬಂಧಿಸಿ, 21 ಕೆಜಿ ಹೆರಾಯಿನ್ ಮತ್ತು ₹1.34 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.
‘ಅಧಿಕೃತ ಮಾಹಿತಿ ಮೇರೆಗೆ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಂದ್ವಾರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಎಲ್‌ಇಟಿ ಉಗ್ರರ ಸಹಚರರಾದ ಅಬ್ದುಲ್ ಮೂಮಿನ್ ಪೀರ್, ಇಸ್ಲಾಂ ಉಲ್ ಹಕ್ ಪೀರ್ ಹಾಗೂ ಸೈಯದ್ ಇಫ್ತಿಕಾರ್ ಇಂದ್ರಬಿ ಎಂಬುವರನ್ನು ಬಂಧಿಸಿದ್ದಾರೆ. ಅವರಿಂದ ಮಾದಕವಸ್ತು ಮತ್ತು ಹಣ ವಶಪಡಿಸಿಕೊಂಡಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ₹100 ಕೋಟಿ ಮೌಲ್ಯದ ಉತ್ತಮ ಗುಣಮಟ್ಟದ 21 ಕೆಜಿ ಹೆರಾಯಿನ್, ₹1.34 ಕೋಟಿ ಮತ್ತು ಹಣ ಎಣಿಕೆ ಮಾಡುವ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಈ ಜಾಲದಲ್ಲಿರುವ ಇತರೆ ಸದಸ್ಯರ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗಿದ್ದು, ಅವರನ್ನು ಸಹ ಬಂಧಿಸುವ ಪ್ರಯತ್ನ ನಡೆದಿದೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನ ಮೂಲದ ಉಗ್ರರೊಂದಿಗೆ ಈ ಜಾಲ ನಿಕಟ ಸಂಪರ್ಕ ಹೊಂದಿದೆ. ಎಲ್‌ಇಟಿ ಭಯೋತ್ಪಾದಕರಿಗೆ ಈ ಮೂಲಕ ಆರ್ಥಿಕ ನೆರವು ನೀಡಲಾಗುತ್ತಿತ್ತು. ಈ ಜಾಲದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.