ADVERTISEMENT

ಕೋವಿಡ್: ಗ್ರಾಮೀಣದಲ್ಲಿ ಶೇ 37, ನಗರಗಳಲ್ಲಿ ಶೇ 42ರಷ್ಟು ಮಕ್ಕಳಿಗೆ ಓದು ಕಷ್ಟ

ಪಿಟಿಐ
Published 7 ಸೆಪ್ಟೆಂಬರ್ 2021, 12:35 IST
Last Updated 7 ಸೆಪ್ಟೆಂಬರ್ 2021, 12:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ನಗರ ಪ್ರದೇಶದಲ್ಲಿ ಶೇ 19 ಮತ್ತು ಗ್ರಾಮೀಣ ಪ್ರದೇಶದಲ್ಲಿ ಶೇ 37ರಷ್ಟು ವಿದ್ಯಾರ್ಥಿಗಳು ಕಲಿಕೆಯಲ್ಲಿ ನಿರತರಾಗಿಲ್ಲ. ಒಟ್ಟಾರೆ ಶೇ 48ರಷ್ಟು ವಿದ್ಯಾರ್ಥಿಗಳು ಕೆಲವು ಪದಗಳನ್ನು ಹೊರತುಪಡಿಸಿ ಸರಳವಾಗಿ ಓದಲೂ ಅಶಕ್ತರಾಗಿದ್ದಾರೆ.

–ವಿದ್ಯಾರ್ಥಿಗಳ ಕಲಿಕೆಯ ಸಾಮರ್ಥ್ಯವನ್ನು ಕುರಿತಂತೆ ಈಚೆಗೆ ನಡೆದ ಸಮೀಕ್ಷೆಯಲ್ಲಿ ವ್ಯಕ್ತವಾಗಿರುವ ಅಂಶವಿದು. ಕೋವಿಡ್‌ ಕಾರಣದಿಂದಾಗಿ ಸುದೀರ್ಘ ಕಾಲದಿಂದ ಶಾಲೆಗಳು ಮುಚ್ಚಿರುವುದರ ದುರಂತ ಪರಿಣಾಮವಿದು ಎಂದು ಸಮೀಕ್ಷೆಯ ವರದಿ ಹೇಳಿದೆ.

‘ಸ್ಕೂಲ್‌’ (ಸ್ಕೂಲ್‌ ಚಿಲ್ಡ್ರನ್ಸ್ ಆಫ್‌ಲೈನ್‌, ಆನ್‌ಲೈನ್‌ ಲರ್ನಿಂಗ್‌) ಸಂಸ್ಥೆಯು ‘ಬೀಗಮುದ್ರೆ: ಶಾಲಾ ಶಿಕ್ಷಣ ಕುರಿತ ತುರ್ತು ವರದಿ’ ಶೀರ್ಷಿಕೆಯಲ್ಲಿ ಈ ವರದಿ ಪ್ರಕಟಿಸಿದೆ. 15 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಗಸ್ಟ್‌ ತಿಂಗಳು ಸಮೀಕ್ಷೆ ನಡೆದಿದ್ದು, ಕಡುಬಡತನದ 1,400 ವಿದ್ಯಾರ್ಥಿಗಳ ಅಭಿಪ್ರಾಯಗಳನ್ನು ಆಧರಿಸಿದೆ.

ADVERTISEMENT

ವರದಿಯ ಪ್ರಕಾರ, ಸಮೀಕ್ಷೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು ನಿರಾಶಾದಾಯಕವಾಗಿವೆ. ಗ್ರಾಮೀಣ ಭಾಗದಲ್ಲಿ ಶೇ 28ರಷ್ಟು ವಿದ್ಯಾರ್ಥಿಗಳು ನಿಯಮಿತವಾಗಿ ಕಲಿಯುತ್ತಿದ್ದಾರೆ. ಶೇ 37ರಷ್ಟು ವಿದ್ಯಾರ್ಥಿಗಳು ಕಲಿಕೆಯಿಂದ ವಿಮುಖರಾಗಿದ್ದಾರೆ. ಕೆಲ ಶಬ್ದ ಹೊರತುಪಡಿಸಿ ಸರಳ ಓದು ಕೂಡಾ ಈ ಮಕ್ಕಳಿಗೆ ಸಾಧ್ಯವಾಗಿಲ್ಲ ಎಂದೂ ತಿಳಿಸಿದೆ.

ನಿಯಮಿತವಾಗಿ ಕಲಿಯುತ್ತಿರುವ, ಕಲಿಕೆಯಿಂದ ವಿಮುಖರಾದವರ ಮತ್ತು ಕೆಲ ಪದ ಹೊರತುಪಡಿಸಿ ಓದಲೂ ಶಕ್ತರಲ್ಲದ ವಿದ್ಯಾರ್ಥಿಗಳ ಪ್ರಮಾಣ ನಗರಪ್ರದೇಶದಲ್ಲಿ ಕ್ರಮವಾಗಿ ಶೇ 47, ಶೇ 19 ಮತ್ತು ಶೇ 42ರಷ್ಟಿದೆ ಎಂದು ಸಮೀಕ್ಷೆಯು ವಿವರಿಸಿದೆ.

‘ಸ್ಕೂಲ್‌’ ಸಮೀಕ್ಷೆಯಲ್ಲಿ ವ್ಯಕ್ತವಾಗಿರುವ ಇನ್ನೊಂದು ಅಂಶವೆಂದರೆ, ಬಹುತೇಕ ಸರ್ಕಾರಿ ಶಾಲೆಗಳಿಗೆ ಹೋಗುವ ಮಕ್ಕಳಿರುವ ಹಾಡಿಗಳಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿರುವುದು.

ಕೋವಿಡ್‌ ಸೋಂಕು ಏರಿಕೆಯ ಹಿಂದೆಯೇ ಬಹುತೇಕ ಒಂದೂವರೆ ವರ್ಷದಿಂದ ಶಿಕ್ಷಣ ಸಂಸ್ಥೆಗಳು ಬಂದ್‌ ಆಗಿವೆ. ಸದ್ಯ, ಪರಿಸ್ಥಿತಿ ಸುಧಾರಿಸುತ್ತಿದ್ದು, ಹೆಚ್ಚಿನ ರಾಜ್ಯಗಳಲ್ಲಿ ಸೆಪ್ಟೆಂಬರ್‌ ತಿಂಗಳಿಂದ ಹಂತ ಹಂತವಾಗಿ ಶಾಲೆಗಳು ಪುನಾರಂಭವಾಗುತ್ತಿವೆ.

ಆನ್‌ಲೈನ್ ಮೂಲಕ ನಿಯಮಿತವಾಗಿ ತರಗತಿಗಳಿಗೆ ಹಾಜರಾಗುತ್ತಿರುವ ಮಕ್ಕಳ ಪ್ರಮಾಣ ನಗರ ಪ್ರದೇಶದಲ್ಲಿ ಶೇ 24 ಇದ್ದರೆ, ಗ್ರಾಮೀಣ ಭಾಗದಲ್ಲಿ ಶೇ 8ರಷ್ಟಿದೆ. ಆರ್ಥಿಕ ಸಮಸ್ಯೆ, ನೆಟ್‌ವರ್ಕ್‌ ಅಲಭ್ಯತೆ, ಸ್ಮಾರ್ಟ್‌ಫೋನ್‌ ಖರೀದಿಸಲು ಶಕ್ತರಲ್ಲದಿರುವುದು ಆನ್‌ಲೈನ್‌ ತರಗತಿ ಎಟುಕದಿರಲು ಕಾರಣಗಳು ಎಂದು ವರದಿ ಉಲ್ಲೇಖಿಸಿದೆ.

ಸಮೀಕ್ಷೆಯಲ್ಲಿ ಪಾಲ್ಗೊಂಡ ಹೆಚ್ಚಿನ ಕುಟುಂಬಗಳು ಹೇಳಿದ ಕಾರಣ ಸ್ಮಾರ್ಟ್ ಫೋನ್‌ ಇಲ್ಲ ಎಂಬುದೇ ಆಗಿದೆ. ಆದರೆ, ಇದು ಮೊದಲ ತಡೆಗೋಡೆಯಷ್ಟೆ. ಸ್ಮಾರ್ಟ್‌ ಫೋನ್ ಇರುವ ಕುಟುಂಬಗಳಲ್ಲಿಯೂ ನಿಯಮಿತವಾಗಿ ತರಗತಿಗೆ ಬರುವ ಮಕ್ಕಳ ಸಂಖ್ಯೆ ನಗರ ಪ್ರದೇಶದಲ್ಲಿ ಶೇ 31, ಗ್ರಾಮೀಣ ಭಾಗದಲ್ಲಿ ಶೇ 15ರಷ್ಟು ಮಾತ್ರ. ಬಹುತೇಕ ಸಂದರ್ಭದಲ್ಲಿ ಪೋಷಕರ ಫೋನ್‌ ಅನ್ನು ಮನೆಯ ಹಿರಿಯ ಮಗ, ಮಗಳು ಬಳಸಿದರೆ, ಕಿರಿಯರು ಆಗ ಆ ಅವಕಾಶದಿಂದಲೂ ವಂಚಿತರಾಗುತ್ತಾರೆ.

ದಲಿತರು, ಆದಿವಾಸಿ ಕುಟುಂಬಗಳ ಮಕ್ಕಳನ್ನು ಗಮನಿಸಿದರೆ ಪರಿಸ್ಥಿತಿ ಇನ್ನೂ ದುಸ್ತರವಾಗಿದೆ. ಕಲಿಕೆಯ ಗುಣಮಟ್ಟ, ನಿಯಮಿತ ಹಾಜರಾಗಿ, ಓದುವ ಸಾಮರ್ಥ್ಯ ಆತಂಕಕರ ಸ್ಥಿತಿಯಲ್ಲಿದೆ ಎನ್ನುತ್ತದೆ ಸಮೀಕ್ಷೆ.

ಉದಾಹರಣೆಗೆ, ಗ್ರಾಮೀಣ ಭಾಗದಲ್ಲಿ ಶೇ 4ರಷ್ಟು ಎಸ್‌ಸಿ., ಎಸ್‌ಟಿ ಮಕ್ಕಳು ಮಾತ್ರವೇ ನಿಯಮಿತವಾಗಿ ಆನ್‌ಲೈನ್‌ ತರಗತಿಗೆ ಹಾಜರಾಗುತ್ತಾರೆ. ಆನ್‌ಲೈನ್‌ ತರಗತಿಗೆ ಹಾಜರಾಗುವ ಗ್ರಾಮೀಣ ಭಾಗದ ಎಸ್‌ಸಿ., ಎಸ್‌ಟಿಯೇತರ ಮಕ್ಕಳ ಪ್ರಮಾಣ ಶೇ 15ರಷ್ಟಿದೆ.

ಶಾಲೆಗಳನ್ನು ಆದಷ್ಟು ಶೀಘ್ರ ಪುನಾರಂಭಿಸಬೇಕು ಎಂಬುದು ಬಹುತೇಕ ವಿದ್ಯಾರ್ಥಿಗಳ ಅನಿಸಿಕೆ. ಎಷ್ಟು ಸಾಧ್ಯವೋ, ಅಷ್ಟು ಬೇಗ ಶಾಲೆಗಳನ್ನು ಪುನಾರಂಭ ಮಾಡಿ ಎಂಬುದು ಶೇ 98ರಷ್ಟು ಪರಿಶಿಷ್ಟ ಜಾತಿ, ಪಂಗಡ ವಿದ್ಯಾರ್ಥಿಗಳ ಅನಿಸಿಕೆ.

ಪರಿಸ್ಥಿತಿಯನ್ನು ಸುಧಾರಿಸುವ ಮಾರ್ಗದಲ್ಲಿ ಶಾಲೆಗಳನ್ನು ಪುನರಾರಂಭ ಮಾಡುವುದು ಮೊದಲ ಹೆಜ್ಜೆ ಮಾತ್ರ. ಕೋವಿಡ್‌ನಿಂದ ಆಗಿರುವ ಪರಿಣಾಮಗಳನ್ನು ಸರಿಪಡಿಸಲು ವರ್ಷಗಳೇ ಬೇಕಾಗಬಹುದು ಎಂಬ ಅಭಿಪ್ರಾಯವನ್ನು ಸಮೀಕ್ಷೆಯಲ್ಲಿ ವ್ಯಕ್ತಪಡಿಸಲಾಗಿದೆ.

ಅರ್ಥಿಕ ತಜ್ಞರಾದ ಜೀನ್‌ ಡ್ರೀಜ್‌, ನಿರಾಲಿ ಭಕ್ಲಾ ಒಳಗೊಂಡಂತೆ ಹಲವು ಪರಿಣಿತರ ನೇತೃತ್ವದಲ್ಲಿ ಸಮೀಕ್ಷೆ ನಡೆದಿದ್ದು, ಸುಮಾರು 100 ಮಂದಿ ಸ್ವಯಂಸೇವಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.