ಗುವಾಹಟಿ: ಅಶಾಂತಿ ಸೃಷ್ಟಿಸುವವರಿಗೆ ಕಂಡಲ್ಲಿ ಗುಂಡಿಕ್ಕುವಂತೆ ಆದೇಶಿಸಿದ್ದ ಧುಬ್ರಿಯಲ್ಲಿ 38 ಜನರನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಶನಿವಾರ ತಿಳಿಸಿದ್ದಾರೆ.
‘ಬಕ್ರೀದ್ (ಜೂನ್ 7) ಹಬ್ಬದಂದು ಧುಬ್ರಿ ಪಟ್ಟಣದ ಹನುಮಾನ್ ದೇಗುಲದ ಮುಂದೆ ಹಸುವಿನ ರುಂಡ ಪತ್ತೆಯಾಗಿತ್ತು. ಮರುದಿನವೂ ಮತ್ತೆ ಅದೇ ಸ್ಥಳದಲ್ಲಿ ಕಂಡುಬಂದಿತು. ಈ ವಿದ್ಯಮಾನದ ನಂತರ ಕೋಮು ಘರ್ಷಣೆ ನಡೆದಿದೆ’ ಎಂದು ಶುಕ್ರವಾರ ಗಲಭೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ‘ಎಕ್ಸ್’ನಲ್ಲಿ ಪ್ರಕಟಿಸಿದ್ದಾರೆ.
‘ನಬಿನ್ ಬಾಂಗ್ಲಾ’ ಹೆಸರಿನ ಗುಂಪೊಂದು ಬಾಂಗ್ಲಾದೇಶದ ಗಡಿಯಲ್ಲಿರುವ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವುದು ಗಮನಕ್ಕೆ ಬಂದಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರಿಗೆ ಕಂಡಲ್ಲಿ ಗುಂಡಿಕ್ಕುವಂತೆ ಶರ್ಮ ಇದೇ ಸಂದರ್ಭ ಆದೇಶಿಸಿದ್ದರು.
ಧುಬ್ರಿಯನ್ನು ಬಾಂಗ್ಲಾದೇಶದೊಂದಿಗೆ ವಿಲೀನಗೊಳಿಸುವಂತೆ ‘ನಬಿನ್ ಬಾಂಗ್ಲಾ’ ಗುಂಪು ಜಿಲ್ಲೆಯ ವಿವಿಧೆಡೆ ಪೋಸ್ಟರ್ ಅಂಟಿಸಿದೆ ಎಂದು ಹೇಳಿದ್ದರು.
ಜಿಲ್ಲೆಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಸಿಂಗ್ ಅವರನ್ನು ವರ್ಗಾಯಿಸಿರುವ ರಾಜ್ಯ ಸರ್ಕಾರವು, ಹೈಲಾಕಾಂಡಿ ಎಸ್‌ಎಸ್‌ಪಿ ಲೀನಾ ಡೋಲಿ ಅವರನ್ನು ನೇಮಿಸಿದೆ ಎಂದು ಅಧಿಸೂಚನೆ ತಿಳಿಸಿದೆ.
ಜೂನ್ 9ರಂದು ಜಿಲ್ಲಾಡಳಿತ ನಿಷೇಧಾಜ್ಞೆ ವಿಧಿಸಿತ್ತು. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ವಾಪಸ್ ಪಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.