ADVERTISEMENT

4ನೇ ಪ್ರಕರಣದಲ್ಲೂ ಲಾಲು ಪ್ರಸಾದ್‌ ದೋಷಿ

ಪಿಟಿಐ
Published 24 ಮಾರ್ಚ್ 2018, 6:40 IST
Last Updated 24 ಮಾರ್ಚ್ 2018, 6:40 IST
ಲಾಲು ಪ್ರಸಾದ್‌
ಲಾಲು ಪ್ರಸಾದ್‌   

ರಾಂಚಿ : ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರು ಮೇವು ಹಗರಣದ ನಾಲ್ಕನೇ ಪ್ರಕರಣದಲ್ಲಿಯೂ ತಪ್ಪಿತಸ್ಥ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣದಲ್ಲಿ ಆರೋಪಿಯಾಗಿದ್ದ ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಜಗನ್ನಾಥ್‌ ಮಿಶ್ರಾ ಅವರನ್ನು ಖುಲಾಸೆಗೊಳಿಸಲಾಗಿದೆ.

ದುಮಕಾ ಖಜಾನೆಯಿಂದ 1990ರ ದಶಕದ ಆರಂಭದಲ್ಲಿ ₹3.13 ಕೋಟಿಯನ್ನು ಅಕ್ರಮವಾಗಿ ಪಡೆದುಕೊಂಡ ಪ್ರಕರಣ ಇದು.

18 ಮಂದಿ ಅಪರಾಧಿಗಳು ಎಂದಿರುವ ಕೋರ್ಟ್‌, ಮಿಶ್ರಾ ಸೇರಿ 12 ಮಂದಿಯನ್ನು ಖುಲಾಸೆಗೊಳಿಸಿದೆ. ಶಿಕ್ಷೆಯ ಪ್ರಮಾಣದ ವಿಚಾರಣೆ ಮಂಗಳವಾರ ಆರಂಭವಾಗಲಿದೆ.

ADVERTISEMENT

ಇತರ ಪ್ರಕರಣಗಳಲ್ಲಿ ತಪ್ಪಿತಸ್ಥರಾಗಿಜೈಲು ಶಿಕ್ಷೆ ಅನುಭವಿಸುತ್ತಿರುವ ಲಾಲು ಅವರು ತೀರ್ಪು ಪ್ರಕಟಿಸಿದ ಸಂದರ್ಭದಲ್ಲಿನ್ಯಾಯಾಲಯದಲ್ಲಿ
ಇದ್ದರು. ‘ತೀರ್ಪಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಆದರೆ, ಈ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಆರ್‌ಜೆಡಿ ಉಪಾಧ್ಯಕ್ಷ ರಘುವಂಶ ಪ್ರಸಾದ್‌ ಸಿಂಗ್‌ ತಿಳಿಸಿದ್ದಾರೆ. 

‘ಒಂದೇ ಪ್ರಕರಣದಲ್ಲಿ ಒಬ್ಬ ಮಾಜಿ ಮುಖ್ಯಮಂತ್ರಿಗೆ ಶಿಕ್ಷೆ ನೀಡಿದ್ದರೆ ಮತ್ತೊಬ್ಬ ಮಾಜಿ ಮುಖ್ಯಮಂತ್ರಿಯನ್ನು ಖುಲಾಸೆ ಮಾಡಲಾಗಿದೆ.

ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಲಾಲು ಅವರನ್ನು ಮುಗಿಸುವ ಮೋದಿ ಮತ್ತು ನಿತೀಶ್‌ ಅವರ ಕಾರ್ಯತಂತ್ರದ ಬಗ್ಗೆ ನಮಗೆ ತಿಳಿದಿದೆ’ ಎಂದು ಸಿಂಗ್‌ ಹೇಳಿದ್ದಾರೆ.

ಆರು ಪ್ರಕರಣಗಳು

ಮೊದಲ ಪ್ರಕರಣ: ಬಂಕಾ ಮತ್ತು ಭಾಗಲ್ಪುರ ಜಿಲ್ಲಾ ಖಜಾನೆಗಳಿಂದ ₹47 ಲಕ್ಷ ಮೊತ್ತವನ್ನು ಅಕ್ರಮವಾಗಿ ಪಡೆದುಕೊಂಡ ಪ್ರಕರಣ. ಲಾಲುಗೆ ಐದೂವರೆ ವರ್ಷ ಜೈಲು ಶಿಕ್ಷೆಯ ತೀರ್ಪು 2013ರಲ್ಲಿ ಪ್ರಕಟವಾಯಿತು. ಈ ಪ್ರಕರಣದಿಂದಾಗಿ ಲಾಲು ಅವರು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡರು. ಶಿಕ್ಷೆ ಪೂರ್ಣಗೊಳಿಸಿದ ನಂತರದ ಆರು ವರ್ಷ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ

ಎರಡನೇ ಪ್ರಕರಣ: ದೇವಗಡ ಖಜಾನೆಯಿಂದ ₹89 ಲಕ್ಷ ಪಡೆದ ಪ್ರಕರಣದಲ್ಲಿ ಲಾಲೂ ತಪ್ಪಿತಸ್ಥ. 2017ರ ಡಿಸೆಂಬರ್‌ 23ರಂದು ಮೂರೂವರೆ ವರ್ಷ ಶಿಕ್ಷೆ ಪ್ರಕಟ

ಮೂರನೇ ಪ್ರಕರಣ: ಚಾಯಿಬಾಸಾ ಖಜಾನೆಯಿಂದ ₹37.62 ಕೋಟಿಯನ್ನು ಅಕ್ರಮವಾಗಿ ಬಳಸಿಕೊಂಡ ಪ್ರಕರಣದಲ್ಲಿ ಇದೇ ಜನವರಿ 25ರಂದು ಐದು ವರ್ಷ ಸೆರೆವಾಸದ ಶಿಕ್ಷೆ

ಐದನೇ ಪ್ರಕರಣ: ರಾಂಚಿಯ ದೊರಾಂಡಾ ಖಜಾನೆಯಿಂದ ₹139 ಕೋಟಿ ಮೊತ್ತವನ್ನು ಅಕ್ರಮವಾಗಿ ಪಡೆದುಕೊಂಡ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಇದೆ

ಆರನೇ ಪ್ರಕರಣ: ಭಾಗಲ್ಪುರ ಖಜಾನೆಯಿಂದ ಹಣವನ್ನು ಅಕ್ರಮವಾಗಿ ಪಡೆದುಕೊಂಡ ಪ್ರಕರಣದ ವಿಚಾರಣೆ ಬಿಹಾರದಲ್ಲಿ ನಡೆಯುತ್ತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.